Greatest All Rounders Of Cricket: ಪ್ರತಿ ಕ್ರಿಕೆಟ್ ತಂಡದ ಪ್ರಮುಖ ಶಕ್ತಿ ಅಂದ್ರೆ ಆಲ್‌ರೌಂಡರ್‌ಗಳು. ತಂಡದ ಅಗತ್ಯಗಳಿಗೆ ಅನುಗುಣವಾಗಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲರು. ಟೆಸ್ಟ್, ಏಕದಿನ ಅಥವಾ ಟಿ20 ಸೇರಿದಂತೆ ಯಾವುದೇ ಸ್ವರೂಪವಾಗಲಿ ಆಲ್‌ರೌಂಡರ್ಸ್ ಬಹಳ ಮುಖ್ಯವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕೆಲವರು ಬ್ಯಾಟರ್‌ಗಳಾಗಿ ಆರಂಭಿಸಿ ತಮ್ಮ ಬೌಲಿಂಗ್ ಸ್ಕಿಲ್ಸ್ ಸುಧಾರಿಸಿಕೊಳ್ಳುತ್ತಾರೆ. ಇತರರು ಬೌಲರ್‌ಗಳಾಗಿ ಬಂದು ಬ್ಯಾಟಿಂಗ್ ಕೌಶಲ್ಯದಲ್ಲಿ ತಮ್ಮ ಛಾಪು ಮೂಡಿಸುತ್ತಾರೆ. ಆದರೂ ಎರಡೂ ವಿಭಾಗಗಳಲ್ಲಿ ಸಮಾನವಾಗಿ ಉತ್ತಮ ಸಾಧನೆ ಮಾಡಿದ ಕ್ರಿಕೆಟಿಗರು ಇತಿಹಾಸದಲ್ಲಿ ಕಡಿಮೆ ಎಂಬುದು ಗಮನಾರ್ಹ.
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಆರು ಆಲ್‌ರೌಂಡರ್ಸ್ ಮಾತ್ರ 6000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು 600ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರಿದ್ದಾರೆ.
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ): ಈ ಲಿಸ್ಟ್ನಲ್ಲಿ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಇಲ್ಲಿಯವರಿಗೆ 14,730 ರನ್ ಗಳಿಸಿದ್ದಾರೆ. ಬಾಂಗ್ಲಾದೇಶದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಶಕೀಬ್ ಅಲ್ ಹಸನ್. ಅವರು 712 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಈ ಮೂಲಕ ಅವರು ಬಾಂಗ್ಲಾದೇಶದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಶಕೀಬ್ ತಮ್ಮ ವೃತ್ತಿಜೀವನದಲ್ಲಿ 14 ಶತಕಗಳನ್ನು ಗಳಿಸಿದ್ದಾರೆ ಮತ್ತು 25 ಬಾರಿ ಐದು ವಿಕೆಟ್ ಕಬಳಿಸಿರುವ ಪರ್ಫಾರ್ಮೆನ್ಸ್ ನೀಡಿದ್ದಾರೆ.
ಕಪಿಲ್ ದೇವ್ (ಭಾರತ): ಇಂದಿಗೂ ಭಾರತದ ಅಗ್ರ ಆಲ್‌ರೌಂಡರ್‌ಗಳ ವಿಷಯಕ್ಕೆ ಬಂದಾಗ ಕಪಿಲ್ ದೇವ್ ಹೆಸರು ಖಂಡಿತವಾಗಿಯೂ ನೆನಪಿಗೆ ಬರುತ್ತದೆ. 1983ರಲ್ಲಿ ಭಾರತ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ. ಕಪಿಲ್ ತಮ್ಮ ವೃತ್ತಿಜೀವನದಲ್ಲಿ 9,031 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕಗಳಿವೆ ಮತ್ತು ಅವರು ಬೌಲರ್ ಆಗಿ 687 ವಿಕೆಟ್‌ಗಳನ್ನು ಪಡೆದಿದ್ದಾರೆ. 25 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.
ಶಾನ್ ಪೊಲಾಕ್ (ದಕ್ಷಿಣ ಆಫ್ರಿಕಾ): ಶಾನ್ ಪೊಲಾಕ್ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪೊಲಾಕ್ ಒಟ್ಟು 829 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 21 ಬಾರಿ ಐದು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಪೊಲಾಕ್ ತನ್ನ ಬೌಲಿಂಗ್ ಜೊತೆಗೆ ವಿಶ್ವಾಸಾರ್ಹ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್. ತಮ್ಮ ವೃತ್ತಿಜೀವನದಲ್ಲಿ 7,386 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ.
ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್): ಡೇನಿಯಲ್ ವೆಟ್ಟೋರಿ ನ್ಯೂಜಿಲೆಂಡ್‌ನ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು. ತಮ್ಮ ವೃತ್ತಿಜೀವನದಲ್ಲಿ 705 ವಿಕೆಟ್‌ಗಳನ್ನು ಪಡೆದಿದ್ದಾರೆ. 22 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಒಬ್ಬ ಸ್ಪೆಷಲಿಸ್ಟ್ ಬೌಲರ್ ಆಗಿಯೂ ಸಹ ತಮ್ಮ ವೃತ್ತಿಜೀವನದಲ್ಲಿ 6,989 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ.
ರವೀಂದ್ರ ಜಡೇಜಾ (ಭಾರತ): ಜಡೇಜಾ ಟೀಮ್ ಇಂಡಿಯಾದ ಅಗ್ರ ಆಲ್‌ರೌಂಡರ್‌ಗಳಲ್ಲಿ ಒಬ್ಬರು. 17 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 603 ವಿಕೆಟ್‌ಗಳನ್ನು ಪಡೆದಿದ್ದು, 4 ಶತಕಗಳೂ ಒಳಗೊಂಡಂತೆ 6,664 ರನ್ ಗಳಿಸಿದ್ದಾರೆ. ಪ್ರಸ್ತುತ ಪೀಳಿಗೆಯ ಅತ್ಯುತ್ತಮ ಆಲ್‌ರೌಂಡರ್ ಆಗಿ ಮುಂದುವರೆದಿದ್ದಾರೆ.
ವಾಸಿಮ್ ಅಕ್ರಮ್ (ಪಾಕಿಸ್ತಾನ): ಪಾಕಿಸ್ತಾನ ಪರ ವಾಸಿಂ ಅಕ್ರಮ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ವೃತ್ತಿಜೀವನದಲ್ಲಿ 916 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 31 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಾಕಿಸ್ತಾನಿ ಬೌಲರ್ ಆದರು. 3 ಶತಕಗಳೊಂದಿಗೆ 6,615 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಮುರಿದು ನಂಬರ್ 1 ಸ್ಥಾನಕ್ಕೇರಿದ ಬಾಬರ್ ಅಜಮ್