ETV Bharat / state

ಹೂಡಿಕೆದಾರರ ಸಮಾವೇಶಕ್ಕೆ ತೆರೆ: 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ- ಸೋಮಣ್ಣ - INVEST KARNATAKA 2025

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಷ್ಠಿತ 'ಜಾಗತಿಕ ಹೂಡಿಕೆದಾರರ ಸಮಾವೇಶ'ಕ್ಕೆ ಇಂದು ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ತೆರೆಬಿತ್ತು.

INVEST KARNATAKA 2025
ಜಾಗತಿಕ ಹೂಡಿಕೆದಾರರ ಸಮಾವೇಶ (ETV Bharat)
author img

By ETV Bharat Karnataka Team

Published : Feb 14, 2025, 9:42 PM IST

ಬೆಂಗಳೂರು: ಕಳೆದ ಮೂರು ದಿನಗಳಿಂದ ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ 'ಜಾಗತಿಕ ಹೂಡಿಕೆದಾರರ ಸಮಾವೇಶ'ಕ್ಕೆ ಇಂದು ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ತೆರೆ ಬಿತ್ತು. 5 ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣತರು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದ ಸಮಾವೇಶವು ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಯಿತು.

ಗಣ್ಯಾತಿಗಣ್ಯರು ಮತ್ತು ರಾಜ್ಯ ಸಚಿವ ಸಂಪುಟದ ಹಲವು ಸಚಿವರು ಹಾಜರಿದ್ದ ಸಮಾರೋಪ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು 2025-30ರ ಅವಧಿಯವರೆಗಿನ ಪರಿಸರಸ್ನೇಹಿ ಸಾರಿಗೆ ನೀತಿಯನ್ನು ಬಿಡುಗಡೆಗೊಳಿಸಿದರು. ಜೊತೆಗೆ ಇದೇ ವೇದಿಕೆಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉದ್ಯಮ ಸಂಸ್ಥೆಗಳಿಗೆ 'ವೆಂಚುರೈಸ್ ಚಾಲೆಂಜ್' ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಇದೇ ಪ್ರಥಮ ಬಾರಿಗೆ ಸಾಧಕ ಕಂಪನಿಗಳಿಗೆ 'ಇನ್ವೆಸ್ಟ್ ಕರ್ನಾಟಕ', ಎಸ್ಎಂಇ ಕನೆಕ್ಟ್, ವೆಂಚುರೈಸ್ ಚಾಲೆಂಜ್ ಪುರಸ್ಕಾರಗಳನ್ನು ಪ್ರದಾನ ಮಾಡಿದ್ದು, ಈ ಸಮಾವೇಶದ ವಿಶೇಷವಾಗಿತ್ತು.

invest karnataka 2025
ಜಾಗತಿಕ ಹೂಡಿಕೆದಾರರ ಸಮಾವೇಶ (ETV Bharat)

287 ಕಿ.ಮೀ. ವರ್ತುಲ ರೈಲ್ವೆ ಡಿಪಿಆರ್ ಸಿದ್ಧ: ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ, "ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಮುಂತಾದ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ 287 ಕಿ.ಮೀ. ಉದ್ದದ ವರ್ತುಲ ರೈಲು ಯೋಜನೆಗೆ ಡಿಪಿಆರ್ ಅಂತಿಮ ಹಂತದಲ್ಲಿದೆ. ದೇವನಹಳ್ಳಿಯಲ್ಲಿ ಮೆಗಾ ರೈಲ್ವೆ ಟರ್ಮಿನಲ್ ಕೂಡ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ರಾಜ್ಯದಲ್ಲಿ ರೈಲ್ವೆ ಜಾಲವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸಲಾಗುತ್ತಿದ್ದು, ಈ ವರ್ಷ 7 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಡಲಾಗಿದೆ. 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ ಆಗಲಿದೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ಕೇಂದ್ರದ ಸಹಯೋಗದೊಂದಿಗೆ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಬೆಂಗಳೂರು ಸಬ್​ ಅರ್ಬನ್​ ರೈಲ್ವೆ ಯೋಜನೆಯು 2027ರ ಕೊನೆಯ ಹೊತ್ತಿಗೆ ಮುಗಿಯುವ ನಿಚ್ಚಳ ಲಕ್ಷಣಗಳು ಕಾಣುತ್ತಿವೆ. ಜಿಲ್ಲಾ ಕೇಂದ್ರಗಳ ಹೊರವಲಯದಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿದರೆ ಕೈಗಾರಿಕಾ ಬೆಳವಣಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಉದ್ಯಮಿಗಳು ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಗಳ ಕಡೆಗೂ ಹೋಗಿ, ಬಂಡವಾಳ ಹೂಡಬೇಕು. ರಾಜ್ಯ ಮತ್ತು ಕೇಂದ್ರಗಳು ರೂಪಿಸಿರುವ ಕೈಗಾರಿಕಾ ನೀತಿಗಳು ಇದಕ್ಕೆ ಪೂರಕವಾಗಿಯೇ ಇವೆ" ಎಂದು ವಿವರಿಸಿದರು.

ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಎ.ಪಪಾಂಡ್ರೂ ಮಾತನಾಡಿ, "ಯೂರೋಪಿನ ದೇಶಗಳು ಸದ್ಯಕ್ಕೆ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅಲ್ಲಿ ಬೆಳವಣಿಗೆಗೆ ದೊಡ್ಡ ಸವಾಲು ಎದುರಾಗಿದೆ. ಆದರೆ, ಒಟ್ಟಾರೆಯಾಗಿ ಭಾರತ ಮತ್ತು ನಿರ್ದಿಷ್ಟವಾಗಿ ಕರ್ನಾಟಕ ಈ ಸವಾಲನ್ನು ಮೆಟ್ಟಿ ನಿಂತಿರುವುದು ಶ್ಲಾಘನೀಯ. ಕರ್ನಾಟಕದ ಕೈಗಾರಿಕಾ ಮತ್ತು ಇತರ ನೀತಿಗಳು ಹೂಡಿಕೆಗೆ ಮೇಲ್ಪಂಕ್ತಿಯಾಗಿವೆ" ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, "ಮೂರು ವರ್ಷಗಳ ನಂತರ ನಡೆದ ಹೂಡಿಕೆದಾರರ ಸಮಾವೇಶವು ಒಂದು ನಿರ್ಣಾಯಕ ಉದ್ದೇಶದೊಂದಿಗೆ ನಡೆದಿದೆ. ನಾವು ಕೈಗಾರಿಕಾ ಬೆಳವಣಿಗೆಯ ಸಾಂಪ್ರದಾಯಿಕ ಮಾದರಿಗಳಿಂದ ಹೊರಬಂದು, ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ಬೆಳೆಸಲು ಸಿದ್ಧವಾಗಿದ್ದೇವೆ ಎನ್ನುವ ನಮ್ಮ ಇಚ್ಛಾಶಕ್ತಿಯನ್ನು ನಾವು ತೋರಿದ್ದೇವೆ. ಇದಕ್ಕೆ ತಕ್ಕಂತೆ ನೂತನ ಕೈಗಾರಿಕಾ ನೀತಿ, ಪರಿಸರಸ್ನೇಹಿ ಸಾರಿಗೆ ನೀತಿ, ಎಐ ಆಧರಿತ ಏಕಗವಾಕ್ಷಿ ಪೋರ್ಟಲ್ ಮುಂತಾದವುಗಳನ್ನು ಹೂಡಿಕೆದಾರರಿಗೆ ಕೊಡುಗೆಯಾಗಿ ನೀಡಿದ್ದೇವೆ. ಸಮಾವೇಶದ ಯಶಸ್ಸಿಗೆ ಹೆಗಲು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಚಾಲನೆ ಪಡೆದ ಸಮಾವೇಶವು 75 ಗೋಷ್ಠಿಗಳು, ಹತ್ತಾರು ಉದ್ಯಮಗಳು ಮತ್ತು ಸರ್ಕಾರದ ನಡುವಿನ ಸಭೆಗಳು, ಲಕ್ಷಾಂತರ ಕೋಟಿ ಹೂಡಿಕೆಯನ್ನು ಹೊತ್ತು ತರಲಿರುವ ಒಡಂಬಡಿಕೆಗಳು, ಕ್ವಿನ್ ಸಿಟಿ ಅಭಿವೃದ್ಧಿ ಕುರಿತ ವಿಚಾರ ವಿನಿಮಯಗಳಿಗೆ ಸಾಕ್ಷಿಯಾಯಿತು.

invest karnataka 2025
ಜಾಗತಿಕ ಹೂಡಿಕೆದಾರರ ಸಮಾವೇಶ (ETV Bharat)

ಜೊತೆಗೆ 19 ದೇಶಗಳ ರಾಯಭಾರಿಗಳು, ಕಾನ್ಸುಲೇಟ್​ ಜನರಲ್​ಗಳು, ಉದ್ಯಮ ಸಂಘಟನೆಗಳ ಉನ್ನತ ಪ್ರತಿನಿಧಿಗಳು, ಜಾಗತಿಕ ಮಟ್ಟದ ಕಂಪನಿಗಳ ಸಿಇಒ ಮತ್ತು ಅಧ್ಯಕ್ಷರ ಜತೆ ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಭೇಟಿಯೂ ಸಾಂಗವಾಗಿ ನಡೆಯಿತು. 9 ದೇಶಗಳಿಗೆ ಸಮಾವೇಶದಲ್ಲಿ ಪ್ರತ್ಯೇಕ ಪೆವಿಲಿಯನ್​ಗಳನ್ನೇ ನೀಡಲಾಗಿತ್ತು. ಜೊತೆಗೆ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ವಾಗ್ದಾನವನ್ನೂ ಸಮಾವೇಶದಲ್ಲಿ ಕಾಣಲು ಸಾಧ್ಯವಾಯಿತು.

ಕಾರ್ಯಕ್ರಮದಲ್ಲಿ ಸಂಸದ ಶಶಿ ತರೂರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಮಂಕಾಳ ವೈದ್ಯ, ಆರ್.ಬಿ.ತಿಮ್ಮಾಪುರ, ಈಶ್ವರ ಖಂಡ್ರೆ, ಡಾ.ಎಂ.ಸಿ.ಸುಧಾಕರ್, ಶಿವರಾಜ ತಂಗಡಗಿ, ರಹೀಂ ಖಾನ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ಗೌರಿಬಿದನೂರು, ಧಾರವಾಡ, ಹಾರೋಹಳ್ಳಿಯಲ್ಲಿ ಇ.ವಿ ಕ್ಲಸ್ಟರ್ ಸ್ಥಾಪನೆ; 1 ಲಕ್ಷ ಉದ್ಯೋಗ ಸೃಷ್ಟಿ

ಇದನ್ನೂ ಓದಿ: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ: ಡಿ.ಕೆ.ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.