ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲ ತಾಜ್ ಅಲಿ ಮೌಲಾಸಾಬ್ ನದಾಫ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸಂವಿಧಾನದ 224ನೇ ವಿಧಿಯ ಕಲಂ (1)ರ ಪ್ರಕಾರ ತಾಜ್ ಅಲಿ ಮೌಲಾಸಾಬ್ ನದಾಫ್ ಅವರನ್ನು ಅಧಿಕಾರ ವಹಿಸಿಕೊಳ್ಳುವ ದಿನದಿಂದ ಅನ್ವಯವಾಗುವಂತೆ, ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನದಾಫ್ ಅವರು ಇದೇ 17ರಂದು ಬೆಳಗ್ಗೆ ಹೈಕೋರ್ಟ್‌ನ ಕೋರ್ಟ್ ಹಾಲ್ ಒಂದರಲ್ಲಿ ನಡೆಯುವ ಸಮಾರಂಭದಲ್ಲಿ ನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಲಿದ್ದಾರೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೂತನ ನ್ಯಾಯಮೂರ್ತಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಇದನ್ನೂ ಓದಿ: ಜನನಿ ಪಬ್ಲಿಕ್ ಶಾಲೆಯ 18 ಮಕ್ಕಳು ಸಿಬಿಎಸ್‌ಇ ಪರೀಕ್ಷೆಗೆ ಹಾಜರಾಗಲು ಹೈಕೋರ್ಟ್ ಅನುಮತಿ
ಸುಪ್ರೀಂ ಕೋರ್ಟ್ ಕೊಲಿಜಿಯಂ ನದಾಫ್ ಸೇರಿ ಮೂವರು ವಕೀಲರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಕರ್ನಾಟಕ ಹೈಕೋರ್ಟ್‌ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 49 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 13 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: ವಕ್ಫ್ ಮಂಡಳಿ ಸದಸ್ಯರ ನೇಮಕ ರದ್ಧತಿಗೆ ಮನವಿ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ