ಚಂಡೀಗಢ(ಪಂಜಾಬ್-ಹರಿಯಾಣ): ರೈತರ ಒಂದು ವರ್ಷದ ಪ್ರತಿಭಟನೆಯ ನಂತರ ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರ ತಂಡ ಪ್ರತಿಭಟನೆ ನಿರತ ರೈತ ಸಂಘಟನೆಗಳ ಮುಖಂಡರೊಂದಿಗೆ ಸೌಹಾರ್ದಯುತ ಸಭೆ ನಡೆಸಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಕೇಂದ್ರ ತಂಡ ಮತ್ತು ರೈತ ಪ್ರತಿನಿಧಿಗಳ ನಡುವೆ ಶುಕ್ರವಾರ ಚಂಡೀಗಢದಲ್ಲಿ ಸಭೆ ನಡೆದಿದೆ. ಮುಂದಿನ ಸುತ್ತಿನ ಮಾತುಕತೆ ಫೆ.22ರಂದು ನಡೆಯಲಿದೆ ಎಂದು ಎರಡೂ ಕಡೆಯವರು ತಿಳಿಸಿದ್ದಾರೆ. ರೈತ ಸಮುದಾಯದ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜೋಶಿ ಮಾತನಾಡಿದರೆ, ರೈತ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸಿದರು.
ಮಹಾತ್ಮಾ ಗಾಂಧಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ನಡೆದ ಸಭೆಯ ನಂತರ ಜೋಶಿ ಮತ್ತು ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೆವಾಲ್ ಇಬ್ಬರೂ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಆಂದೋಲನದ ನೇತೃತ್ವ ವಹಿಸಿರುವ ಎರಡು ವೇದಿಕೆಗಳ ರೈತ ಪ್ರತಿನಿಧಿಗಳು ಭಾಗವಹಿಸಿದ್ದರು. ಮತ್ತು ಪಂಜಾಬ್ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದ್ದಿಯಾನ್, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕಟಾರುಚಕ್ ಮತ್ತು ಇತರ ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು, ಸೌಹಾರ್ದಯುತ ಮಾತುಕತೆ ನಡೆಯಿತು ಎಂದು ಜೋಶಿ ಹೇಳಿದರು. ಫೆಬ್ರವರಿ 22 ರಂದು ಇಲ್ಲಿ ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಜೋಶಿ ತಿಳಿಸಿದರು. ಆ ಸಭೆಯಲ್ಲಿ ತಾವು ಸಹ ಭಾಗಿಯಾಗುವುದಾಗಿ ಮಾಹಿತಿ ನೀಡಿದರು.
ಕಾನೂನು ಖಾತರಿ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ: ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್, "ಬೆಳೆಗಳ ಮೇಲಿನ ಎಂಎಸ್‌ಪಿಯ ಕಾನೂನು ಖಾತರಿಯ ವಿಷಯದ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿದೆ ಎಂದರು.
ಸಭೆಯಲ್ಲಿ 2004ರಿಂದ 2014ರವರೆಗೆ ಬೆಳೆ ದರದಲ್ಲಿ ಶೇ.100ರಷ್ಟು ಹೆಚ್ಚಳವಾಗಿದೆ ಎಂದು ರೈತ ಮುಖಂಡರು ಗಮನ ಸೆಳೆದರು. ಕಳೆದ 11 ವರ್ಷಗಳಲ್ಲಿ ಹಣದುಬ್ಬರವೂ ಶೇ.59ರಷ್ಟು ಏರಿಕೆಯಾಗಿದ್ದು, ಬೆಳೆ ದರ ಏರಿಕೆಯಿಂದ ರೈತರಿಗೆ ಲಾಭವಾಗಿಲ್ಲ. ಬೆಳೆಯನ್ನು ಎಂಎಸ್‌ಪಿ ದರದಲ್ಲಿ ಮಾರಾಟ ಮಾಡಿದರೆ ಆಂದೋಲನ ನಡೆಸುವ ಅಗತ್ಯ ಏನಿದೆ ಎಂದು ನಾವು ಹೇಳಿದ್ದೇವೆ. ಕೇಂದ್ರದ ಪ್ರಕಾರ ಹೆಚ್ಚಿನ ಬೆಳೆಗಳು ಎಂಎಸ್‌ಪಿ ಮೇಲೆ ಮಾರಾಟವಾಗಿದ್ದರೆ, ಕಾನೂನು ಖಾತರಿ ನೀಡಲು ಏನು ತೊಂದರೆ, ಇದು ಇಚ್ಛಾಶಕ್ತಿಯ ಪ್ರಶ್ನೆಯಾಗಿದೆ ಎಂದು ರೈತ ಮುಖಂಡರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಂಭು ಗಡಿಯಲ್ಲಿ ಮುಷ್ಕರ ನಿರತ ರೈತರೊಂದಿಗೆ ಇಂದು ಮಧ್ಯಾಹ್ನ ಕೇಂದ್ರ ಸರ್ಕಾರ ಮಾತುಕತೆ