ಅರಕಲಗೂಡು (ಹಾಸನ) : "ತುಂಬಾ ಪವರ್ಫುಲ್ ಪ್ರಧಾನಿ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ" ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ಅವರು ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಅಥವಾ ಚುನಾವಣಾ ಕಮಿಷನ್ನವರಾಗಲಿ ಎಲೆಕ್ಷನ್ ವೋಟಿಂಗ್ ಪ್ಯಾಟರ್ನ್ಅನ್ನು ಕೊಡದಂತೆ ಕಾನೂನನ್ನೇ ತಂದಿದ್ದಾರೆ. ಈ ಹೊಸ ಕಾನೂನಿನಿಂದಾಗಿ ವೋಟರ್ ಲಿಸ್ಟ್ ಕೇಳಿದರೇ ಕೊಡುತ್ತಿಲ್ಲ. ಅದಕ್ಕೆ ಬಿಜೆಪಿಯವರನ್ನು ಕೇಳಿನೋಡಿ. ಈ ಬಗ್ಗೆ ಎಲ್ಲೋ ಒಂದು ರೀತಿಯಲ್ಲಿ ಟ್ಯಾಂಪರಿಂಗ್ ಆಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ" ಎಂದು ಸಂಶಯ ವ್ಯಕ್ತಪಡಿಸಿದರು.
"ಅಲ್ಲದೆ ವಿಪಕ್ಷಗಳು ಕೂಡ ಈ ಬಗ್ಗೆ ಮಾತನಾಡಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ತಕ್ಷಣ ಇಂತಹ ಮಾತು ಕೇಳಿಬರುತ್ತಿವೆ. ಬರೀ ವೋಟಿಂಗ್ ಮಷಿನ್ ಅಲ್ಲ. ಇಡೀ ಸರ್ಕಾರದ ಮಷಿನರಿಯನ್ನೇ ಬಳಕೆ ಮಾಡುತ್ತಿದ್ದಾರೆ. ಕೇಜ್ರಿವಾಲ್ರನ್ನು ಜೈಲಿಗೆ ಹಾಕಿದರು. ಈ ಬಗ್ಗೆ ಏನೂ ಕಾರಣ ಎಂಬುದು ತಿಳಿದಿಲ್ಲ. ಈ ರೀತಿಯ ಹಲವಾರು ವಿಷಯಗಳು ಇವೆ" ಎಂದು ಲಾಡ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ದೆಹಲಿ ಚುನಾವಣೆ ವೇಳೆ ಕೇವಲ 6 ತಿಂಗಳಲ್ಲಿ 4 ಲಕ್ಷ ಮತಗಳು ಜಾಸ್ತಿಯಾಗಿವೆ. ಈ ಹಿಂದೆ ನಡೆದ ಮಹಾರಾಷ್ಟ್ರ ಚುನಾವಣೆ ವೇಳೆಯೂ ಕೂಡ 40 ರಿಂದ 70 ಲಕ್ಷ ವೋಟ್ಗಳು ಹೆಚ್ಚಾಗಿವೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದಿರುವ ಹೆಚ್ಚಿನ ಮತದಾರರ ಸಂಖ್ಯೆ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೇ ಎಲ್ಲೋ ಒಂದು ರೀತಿಯಲ್ಲಿ ನ್ಯಾಯಯುತ ಚುನಾವಣೆ ನಡೆದಿಲ್ಲ ಎಂಬುದು ತಿಳಿಯುತ್ತಿದೆ. ಇದೊಂದು ರೀತಿಯ ಮೆಕಾನಿಸಮ್ ಕಲಿತಿರುವಂತೆ ಕಾಣುತ್ತಿದೆ" ಟೀಕಿಸಿದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ನಿಗಮ ಮಂಡಳಿಗೆ ಹಣ ಕೊಡಲು ಆಗುತ್ತಿಲ್ಲ. ಮೈಕ್ರೋಫೈನಾನ್ಸ್ ಸಾಲ ಪಡೆದಿರುವ ಕೆಲ ಬಡಕುಟುಂಬಗಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿರುವುದಕ್ಕೆ ಕಾರಣ ಎಂಬ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆ ಕುರಿತು ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿ "ಅಶೋಕ್ ಅವರ ಕಾಲದಲ್ಲಿ ಎಷ್ಟು ಹಣವನ್ನು ಕೊಟ್ಟಿದ್ದಾರೆ. ಕಳೆದ 11 ವರ್ಷದಿಂದ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆಯೂ ಅವರು ತಿಳಿಸಲಿ, ಅನಂತರ ಈ ಬಗ್ಗೆ ಚರ್ಚೆ ಮಾಡೋಣ" ಎಂದರು.
"ರಾಜ್ಯದಿಂದ ಆಯ್ಕೆಗೊಂಡ ಹೆಚ್. ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಅನುದಾನ ತರುವುದು, ಅಭಿವೃದ್ಧಿ ಕೈಗೊಳ್ಳುವುದು ಅವರ ಜವಾಬ್ದಾರಿಯಾಗಿದೆ. ರಾಜ್ಯದಿಂದ ಅವರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡುವ ಅವಶ್ಯಕತೆಯಿಲ್ಲ. ಇಲ್ಲಿರುವ ಹೆಚ್ಇಎಲ್ಗೆ ಕೆಲಸ ಕೊಡಲು ಆಗಿಲ್ಲ. ನಿಮ್ಮದೇ ಕೇಂದ್ರ ಸರ್ಕಾರವಿದೆ ಮಾಡಿ. 23 ಕಂಪನಿಗಳನ್ನು ಮಾರಾಟ ಮಾಡಲಾಗಿದೆ. ಬಿಎಸ್ಎನ್ಎಲ್ ಕುರಿತು ಅವರು ಮಾತನಾಡಲಿ. ಕುದುರೆಮುಖ ಹಾಳಾಗಲು ಕಾರಣವೇನು, ನಮ್ಮ ಕೋಲ್ಮೈನ್ನಿಂದ ಏಕೆ ವೀಕ್ ಆಗುತ್ತಿದೆ. ನಮ್ಮ ಕೇಂದ್ರ ಸರ್ಕಾರದಲ್ಲಿರುವ ಕಂಪನಿಗಳ ಬಗ್ಗೆಯೂ ಚರ್ಚೆ ಮಾಡೋಣ" ಎಂದು ಹೇಳಿದರು.
ಇದಕ್ಕೂ ಮುನ್ನ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟ್ ಬೀಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ, ಪ್ರಸನ್ನಕುಮಾರ್ ಇದ್ದರು.
ಇದನ್ನೂ ಓದಿ: ರಾಜಣ್ಣ ದೊಡ್ಡವರು, ಅವರ ಬಗ್ಗೆ ನಾನು ಮಾತನಾಡಲ್ಲ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ಡಿಸಿಎಂ ಮಾತು