ದಾವಣಗೆರೆ: ಮುಚ್ಚುವ ಹಂತ ತಲುಪಿದ್ದ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಜನಪ್ರತಿನಿಧಿಗಳ ಕಾಳಜಿಯಿಂದ ಹೈಟೆಕ್ ಸ್ಪರ್ಶ ನೀಡಲಾಗಿದೆ. ಇದೀಗ ಭವ್ಯವಾದ ಅಕ್ಷರಸೌಧವಾಗಿ ತಲೆ ಎತ್ತಿದ್ದು, ಶಾಲೆಯಲ್ಲಿರುವ ವ್ಯವಸ್ಥೆ ಖಾಸಗಿ ಶಾಲೆಗೂ ಸೆಡ್ಡು ಹೊಡೆಯುವಂತಿವೆ.
ಹಳೆಯ ಸರ್ಕಾರಿ ಶಾಲಾ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದ ಕೊಠಡಿಗಳನ್ನು ನೆಲಸಮಗೊಳಿಸಿ ಅದೇ ಸ್ಥಳದಲ್ಲಿ ಆಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಮಾದರಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಶಾಲೆಯನ್ನು ಖಾಸಗಿ ಶಾಲೆಯ ಮಟ್ಟಕ್ಕೆ ಕೊಂಡೊಯ್ಯುವ ಶಪಥ ಮಾಡಿ ದತ್ತು ಪಡೆದಿದ್ದರು. ಅದರಂತೆ ವಿವಿಧ ಅನುದಾನಗಳನ್ನು ಬಳಸಿಕೊಂಡು ಸಾಫ್ಟ್‌ವೇರ್ ಕಂಪೆನಿಯ ಮಾದರಿಯಲ್ಲಿ ಭವ್ಯವಾದ ಹೈಟೆಕ್ ಶಾಲೆಯನ್ನು ನಿರ್ಮಿಸಿದ್ದಾರೆ.
ತಗುಲಿದ ವೆಚ್ಚ: ಹೈಟೆಕ್ ಶಾಲೆ ನಿರ್ಮಿಸಲು ಒಟ್ಟು 3 ಕೋಟಿ 5 ಲಕ್ಷ ರೂಪಾಯಿ ಖರ್ಚಾಗಿದೆ. ಪರಿಷತ್ ಸದಸ್ಯ ರವಿಕುಮಾರ್ ಈ ಶಾಲೆ ನಿರ್ಮಿಸಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರು. ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಟ್ಟು 2.5 ಕೋಟಿ ರೂ ಜೊತೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಸಭಾ ಸದಸ್ಯರಾದ ನಾರಾಯಣ್, ಈರಣ್ಣ ಕಡಾಡಿ, ಕೆ.ಸಿ.ರಾಮಮೂರ್ತಿ ಮುಂತಾದವರು 60 ಲಕ್ಷ ಅನುದಾನ ನೀಡಿ ಶಾಲೆ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದರು. ಹಾಗಾಗಿ ಒಟ್ಟು ಮೂರು ಕೋಟಿ ಐದು ಲಕ್ಷ ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಎಂಎಲ್ಸಿ ರವಿಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
''ಪರಿಷತ್ ಫಂಡ್ನಿಂದ 2 ಕೋಟಿ, ರಾಜ್ಯಸಭೆ ಸದಸ್ಯರಾದ ಕೆ.ಸಿ.ರಾಮಮೂರ್ತಿ, ನಾರಾಯಣ್, ಈರಣ್ಣ ಕಡಾಡಿ, ನಿರ್ಮಲಾ ಸೀತಾರಾಮನ್ ಅವರಿಂದ 60 ಲಕ್ಷ ಅನುದಾನ ಸೇರಿ ಒಟ್ಟು 3.5 ಕೋಟಿ ರೂ.ನಲ್ಲಿ ಕಟ್ಟಡ ಸಿದ್ಧಗೊಂಡಿದೆ. ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಶಾಲೆಗೆ ಕಾಂಪೌಂಡ್ ಬರಬೇಕಿದೆ. ಅಂಬೇಡ್ಕರ್ ಸಭಾಂಗಣ, ರಂಗ ಬಯಲು ಮಂದಿರ ಸಿದ್ಧವಾಗಿದೆ. ಇದೊಂದು ಸುಸಜ್ಜಿತ ಶಾಲೆಯಾಗಿದ್ದು, ಹೈಸ್ಕೂಲ್ ಮಾನ್ಯತೆ ಕೊಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತು ಕೊಟ್ಟಿದ್ದಾರೆ'' ಎಂದರು.
ಶಾಲೆಯ ವಿಶೇಷತೆಗಳು: ಒಟ್ಟು 20 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಭವ್ಯ ಶಾಲೆಯ ಕಟ್ಟಡ ತಲೆ ಎತ್ತಿದೆ. ಕಟ್ಟಡದಲ್ಲಿ 13 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಟ್ಟು 218 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 1-7ರ ತನಕ ತರಗತಿಗಳು ನಡೆಯುತ್ತಿದ್ದು, 5 ಜನ ಕಾಯಂ ಶಿಕ್ಷಕರು ಹಾಗೂ 3 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೂತನ ಕಟ್ಟಡದಲ್ಲಿ ಕುವೆಂಪು ಬಯಲು ರಂಗಮಂದಿರ, ಅಂಬೇಡ್ಕರ್ ಸಭಾಂಗಣ, ಕಂಪ್ಯೂಟರ್ ಲ್ಯಾಬ್, ಹೈಟೆಕ್ ಲೈಬ್ರರಿ, ಸ್ಮಾರ್ಟ್ ತರಗತಿಗಾಗಿ 2 ಸ್ಮಾರ್ಟ್ ಬೋರ್ಡ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಮಕ್ಕಳಿಗೆ ಅತ್ಯವಶ್ಯಕವಾಗಿರುವ ಸುಸಜ್ಜಿತವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಶಿಕ್ಷಣ ಸಚಿವರಿಂದ ಉದ್ಘಾಟನೆ: "ಜನಪ್ರತಿನಿಧಿಗಳ ವಿವಿಧ ಅನುದಾನದಿಂದ ಈ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಶಾಲೆಗೆ ಉದ್ಘಾಟನೆ ಭಾಗ್ಯ ಕಲ್ಪಿಸಿ ಹರ್ಷ ವ್ಯಕ್ತಪಡಿಸಿದರು" ಎಂದು ಎಸ್ಡಿಎಂಸಿ ಅಧ್ಯಕ್ಷ ರುದ್ರೇಶ್ ಅವರು ಮಾಹಿತಿ ನೀಡಿದರು.
"ಹಂಚಿನ ಮನೆ ರೀತಿ ಈ ಶಾಲೆಯ ಪರಿಸ್ಥಿತಿ ಇತ್ತು. 1-7 ತನಕ ಶಾಲೆ ಇದ್ದು, ಒಟ್ಟು 13 ಕೊಠಡಿಗಳನ್ನು ನಿರ್ಮಿಸಲಾಗಿದೆ. ಸ್ಮಾರ್ಟ್ ತರಗತಿ, ಶೌಚಾಲಯ, ಆಂಗ್ಲ ಮಾಧ್ಯಮ, ಸ್ಟಾಫ್ ರೂಮ್ ಇವೆ. ಇದು ಕರ್ನಾಟಕ 2ನೇ ಸ್ಮಾರ್ಟ್ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರ ವಹಿಸಿದೆ. ಕಾಂಪೌಂಡ್ ಕಾಮಗಾರಿ ಬಾಕಿ ಇದೆ. ಹೈಸ್ಕೂಲ್ಗೆ ಉತ್ತೇಜಿಸಲು ಸಚಿವರು ಮಾತು ಕೊಟ್ಟಿದ್ದಾರೆ. ಕೇಂದ್ರ ರಾಜ್ಯ ಸಚಿವರು ವಿವಿಧ ಅನುದಾನ, ದಾನಿಗಳು ನೀಡಿದ ಹಣದಿಂದ ನಮ್ಮೂರಲ್ಲಿ ಭವ್ಯ ಶಾಲೆ ತಲೆ ಎತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ: ದೇಗುಲದ ಜಾತ್ರೆ ಉಳಿಕೆ ಹಣದಿಂದ ಜ್ಞಾನ ದೇಗುಲ ಕಟ್ಟಿದ ಗ್ರಾಮಸ್ಥರು - VILLAGERS BUILT SCHOOL BUILDING