ಐಜ್ವಾಲ್ (ಮಿಜೋರಾಂ): ಗಡಿ ಭದ್ರತಾ ಪಡೆಗಳು ಮಿಜೋರಾಂನಲ್ಲಿ 10.80 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದು, ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿವೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಮ್ಯಾನ್ಮಾರ್ನಿಂದ ಈಶಾನ್ಯ ಭಾರತದೊಳಗೆ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಗಟ್ಟಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿರುವ ಮಧ್ಯೆ ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಯಾಗಿರುವುದು ಗಮನಾರ್ಹ.
ಅಸ್ಸಾಂ ರೈಫಲ್ಸ್ ಮತ್ತು ಅಬಕಾರಿ ಮತ್ತು ಮಾದಕವಸ್ತು ಇಲಾಖೆಯ ಅಧಿಕಾರಿಗಳು ಜಂಟಿ ದಾಳಿಯಲ್ಲಿ ಶನಿವಾರ ರಾತ್ರಿ ಚಂಫೈ ಜಿಲ್ಲೆಯ ಎನ್ಗೂರ್-ಬುಲ್ಫೆಕ್ ರಸ್ತೆಯಲ್ಲಿ 3.33 ಕೆಜಿ ತೂಕದ, 9.99 ಕೋಟಿ ರೂ. ಬೆಲೆಬಾಳುವ ತೀವ್ರ ವ್ಯಸನಕಾರಿ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಯಾಬಾ ಅಥವಾ ಪಾರ್ಟಿ ಮಾತ್ರೆಗಳು ಎಂದೂ ಕರೆಯಲ್ಪಡುವ ಮೆಥಾಂಫೆಟಮೈನ್ ಮಾತ್ರೆಗಳನ್ನು ಸಾಗಿಸುತ್ತಿದ್ದ ಮೂವರು ಕಳ್ಳಸಾಗಣೆದಾರರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಪ್ಯಾರಾ ಮಿಲಿಟರಿ ಪಡೆಗಳು ಅಬಕಾರಿ ಮತ್ತು ಮಾದಕವಸ್ತು ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಲಾಂಗ್ಟಲೈ ಜಿಲ್ಲೆಯ ಥಿಂಗ್ಕಾದಿಂದ 81.76 ಲಕ್ಷ ರೂ. ಮೌಲ್ಯದ 116.81 ಗ್ರಾಂ ತೂಕದ ಹೆರಾಯಿನ್ ಅನ್ನು ವಶಪಡಿಸಿಕೊಂಡಿವೆ. ಈ ಮಾದಕವಸ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಡ್ರಗ್ ಪೆಡ್ಲರ್ನನ್ನು ಸಹ ಬಂಧಿಸಲಾಗಿದೆ.
ಬಂಧಿತ ಡ್ರಗ್ ಪೆಡ್ಲರ್ಗಳು ಮತ್ತು ಮ್ಯಾನ್ಮಾರ್ನಿಂದ ಕಳ್ಳಸಾಗಣೆ ಮಾಡಲಾದ ವಶಪಡಿಸಿಕೊಂಡ ಮಾದಕವಸ್ತುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಬಕಾರಿ ಮತ್ತು ಮಾದಕವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.
ನಾಲ್ಕು ದಿನಗಳ ಹಿಂದೆ, ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ 7.64 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೆರಾಯಿನ್ ಮತ್ತು ತೀವ್ರ ವ್ಯಸನಕಾರಿ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದರು ಮತ್ತು ಚಂಫೈ ಜಿಲ್ಲೆಯ ಗಡಿಯಲ್ಲಿರುವ ಜೊಖಾವ್ತಾರ್ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ್ದರು.
ಚಂಫೈ, ಸಿಯಾಹಾ, ಲಾಂಗ್ಟಲೈ, ಹನಹ್ತಿಯಾಲ್, ಸೈತುವಲ್ ಮತ್ತು ಸೆರ್ಚಿಪ್ ಈ ಆರು ಮಿಜೋರಾಂ ಜಿಲ್ಲೆಗಳು ಮ್ಯಾನ್ಮಾರ್ನ ಚಿನ್ ರಾಜ್ಯದೊಂದಿಗೆ 510 ಕಿ.ಮೀ ಉದ್ದದ ರಕ್ಷಣೆಯಿಲ್ಲದ ಗಡಿಯನ್ನು ಹಂಚಿಕೊಂಡಿದ್ದರೂ, ಬೆಟ್ಟ ಗುಡ್ಡಗಳಿಂದ ಆವೃತವಾದ ಚಂಫೈ ಜಿಲ್ಲೆಯು ವಿವಿಧ ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ಇತರ ನಿಷಿದ್ಧ ವಸ್ತುಗಳ ಕಳ್ಳಸಾಗಾಣಿಕೆಯ ಹಾಟ್ಸ್ಪಾಟ್ ಆಗಿದೆ.
ಅರುಣಾಚಲ ಪ್ರದೇಶ (520 ಕಿ.ಮೀ), ಮಣಿಪುರ (398 ಕಿ.ಮೀ), ನಾಗಾಲ್ಯಾಂಡ್ (215 ಕಿ.ಮೀ) ಮತ್ತು ಮಿಜೋರಾಂ (510 ಕಿ.ಮೀ) ಈ ನಾಲ್ಕು ಈಶಾನ್ಯ ರಾಜ್ಯಗಳೊಂದಿಗೆ 1,643 ಕಿ.ಮೀ ಉದ್ದದ ತಡೆರಹಿತ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್ನಿಂದ ವಿವಿಧ ಮಾದಕವಸ್ತುಗಳು, ವಿಶೇಷವಾಗಿ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಮಾತ್ರೆಗಳನ್ನು ಹೆಚ್ಚಾಗಿ ಭಾರತದ ಈಶಾನ್ಯ ರಾಜ್ಯಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ.
ಇದನ್ನೂ ಓದಿ : ಮೇ 4 ರಂದು ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿರುವ ಬದರಿನಾಥ ಧಾಮ - BADRINATH DHAM DOORS OPEN