ಕೊಟ್ಟಾಯಂ (ಕೇರಳ): ಗಾಯಗೊಂಡಿದ್ದ ಬಾಲಕನೊಬ್ಬನ ತಲೆಗೆ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೊಲಿಗೆ ಹಾಕಿದ ಘಟನೆ ಕೊಟ್ಟಾಯಂ ಜಿಲ್ಲೆಯ ವೈಕಂ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಡೆದಿದೆ.
11 ವರ್ಷದ ಬಾಲಕ ಎಸ್ ದೇವತೀರ್ಥ ಎಂಬ ಬಾಲಕ ಬಿದ್ದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿತ್ತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಗಾಯಕ್ಕೆ ಹೊಲಿಗೆ ಹಾಕಬೇಕು ಎಂದು ಸೂಚಿಸಿದ್ದಾರೆ. ಆದರೆ ಅದೇ ಸಮಯಕ್ಕೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಮೊಬೈಲ್ ಟಾರ್ಚ್ ಬೆಳಕಿನಲ್ಲಿ ವೈದ್ಯರು ಬಾಲಕನ ಗಾಯಕ್ಕೆ ಹೊಲಿಗೆ ಹಾಕಿದ್ದಾರೆ.
ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸ್ಟಿಚ್ ಹಾಕುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಘಟನೆ ವಿವಾದಾತ್ಮಕ ತಿರುವು ಪಡೆದುಕೊಂಡಿತು.
ಹೊಲಿಗೆ ಕೋಣೆಯಲ್ಲಿ ವಿದ್ಯುತ್ ಏಕೆ ಇಲ್ಲ? ಆಸ್ಪತ್ರೆಯಲ್ಲಿ ಜನರೇಟರ್ ಇದೆಯೇ ಎಂದು ಪೋಷಕರು ಕೇಳಿದಾಗ, ನಿರಂತರವಾಗಿ ಜನರೇಟರ್ ಹಾಕಲು ಡೀಸೆಲ್ ಬೇಕು ಎಂದು ಕರ್ತವ್ಯದಲ್ಲಿದ್ದ ಅಟೆಂಡರ್ ಉತ್ತರಿಸುವುದು ವಿಡಿಯೋದಲ್ಲಿ ಇದೆ.
ಆಸ್ಪತ್ರೆಯಲ್ಲಿ ಬೆಳಕಿನ ಕೊರತೆಯಿಂದ ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗಿಲ್ಲ. ಮಾತ್ರವಲ್ಲ, ಚಿಕಿತ್ಸೆ ನೀಡುವುದು ಕೂಡ ಕಷ್ಟಕರವಾಗಿತ್ತು ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.
ಇದರ ಮಧ್ಯೆ, ಘಟನೆಯ ಕುರಿತು ಆರ್ಎಂಒ ಅವರು ತನಿಖೆ ನಡೆಸಿ, ವರದಿ ಬಿಡುಗಡೆ ಮಾಡಿದ್ದಾರೆ. ಹೊಸ ವಿದ್ಯುತ್ ಕಂಬ ಅಳವಡಿಸುವಾಗ ಜನರೇಟರ್ಗೆ ಸಂಪರ್ಕಗೊಂಡಿದ್ದ ಸ್ವಿಚ್ ಓವರ್ ಬಟನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ. ಆರ್ಎಂಒ ವರದಿಯನ್ನು ಡಿಎಂಒಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ : 56 ದಿನಗಳ ಚಿಕಿತ್ಸೆ ಬಳಿಕವೂ ಗುಣಮುಖವಾಗದ ಬಾಲಕ