ಪ್ರಯಾಗರಾಜ್ (ಉತ್ತರ ಪ್ರದೇಶ) : ಜಿಲ್ಲೆಯ ಮಿರ್ಜಾಪುರ ಪ್ರದೇಶದ ಪಡ್ಲಿ ಗ್ರಂಟ್ ಗ್ರಾಮದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ 4 ವರ್ಷದ ಬಾಲಕಿಯ ಮೇಲೆ ನಾಯಿಗಳ ಹಿಂಡು ಭೀಕರ ದಾಳಿ ನಡೆಸಿರುವ ಘಟನೆ ನಡೆದಿದೆ.
ಕುಟುಂಬಸ್ಥರು ಹೇಳುವುದೇನು?: 'ಜನವರಿ 31ರ ಸಂಜೆ ನಾಲ್ಕು ವರ್ಷದ ಹಲೀಮಾ ಮನೆಯ ಹೊರಗೆ ಆಟವಾಡುತ್ತಿದ್ದಾಗ ಐದಾರು ಬೀದಿ ನಾಯಿಗಳು ದಾಳಿ ಮಾಡಿದ್ದವು. ಬಾಲಕಿಯ ಚೀರಾಟದ ಸದ್ದು ಕೇಳಿ ಮನೆಯವರು ಅಲ್ಲಿಗೆ ಓಡಿ ಹೋದೆವು. ನಂತರ ನಾಯಿಗಳನ್ನ ಓಡಿಸಿ ಬಾಲಕಿಯನ್ನು ರಕ್ಷಿಸಿದೆವು. ತಕ್ಷಣ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು' ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತ ಬಾಲಕಿಯ ತಂದೆ ಖುಸ್ರಾನ್ ಅವರು ಮಾತನಾಡಿ, ನನ್ನ ಮಗಳು ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಯಿಗಳ ಹಿಂಡು ಆಕೆಯ ಮೇಲೆ ದಾಳಿ ಮಾಡಿದ್ದು, ಮಗಳು ಮೃತಪಟ್ಟಿದ್ದಾಳೆ ಎಂದು ಅಳಲನ್ನು ತೋಡಿಕೊಂಡರು.
ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೀದಿ ನಾಯಿಗಳ ಹಾವಳಿಯ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ನಾಯಿಗಳು ಮಕ್ಕಳು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿದ ಅನೇಕ ಘಟನೆಗಳು ಇಲ್ಲಿ ನಡೆದಿವೆ. ಈ ಕುರಿತು ಹಲವು ಬಾರಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
''ನಾಯಿಗಳ ದಾಳಿಗೆ ಈಗಾಗಲೇ ಹಲವರು ಬಲಿಯಾಗಿದ್ದಾರೆ. ತಿಂಗಳ ಹಿಂದೆಯಷ್ಟೇ ನಾಯಿಗಳು ಸುಮಾರು 20 ಜನರ ಮೇಲೆ ದಾಳಿ ನಡೆಸಿದ್ದವು. ಈಗ ಮಕ್ಕಳನ್ನು ಓದಲು ಹೇಗೆ ಕಳುಹಿಸುವುದು, ಮನೆಯಿಂದ ಹೊರಗೆ ಕರೆದುಕೊಂಡು ಹೋಗಲೂ ಭಯವಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಕೂಡಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು'' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : 4 ವರ್ಷದ ಬಾಲಕನ ಮೇಲೆರೆಗಿದ ರಾಟ್ವೈಲರ್ ಸಾಕುನಾಯಿ; ರಕ್ಷಿಸಲು ಹೋದ ತಂದೆಗೂ ಗಾಯ - PET DOG BITES