ನವದೆಹಲಿ: 2011-12 ರಿಂದ 2022-23 ರವರೆಗಿನ ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ಪ್ರಸ್ತುತ ಸರಣಿಯ ಆಧಾರವನ್ನು ಪರಿಷ್ಕರಿಸಲು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ನೇತೃತ್ವದ ಕಾರ್ಯಪಡೆಯನ್ನು ರಚಿಸುವುದಾಗಿ ಸರಕಾರ ಗುರುವಾರ ಪ್ರಕಟಿಸಿದೆ. ಕಾರ್ಯಪಡೆ ತನ್ನ ಅಂತಿಮ ವರದಿಯನ್ನು 18 ತಿಂಗಳೊಳಗೆ ಆರ್ಥಿಕ ಸಲಹೆಗಾರರ ಕಚೇರಿಗೆ ಸಲ್ಲಿಸುವಂತೆ ಕೇಳಲಾಗಿದೆ.
ಆರ್ಬಿಐ, ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ, ಸಾಂಖ್ಯಿಕ ಸಚಿವಾಲಯ, ಗ್ರಾಹಕ ವ್ಯವಹಾರಗಳ ಇಲಾಖೆ, ಕೃಷಿ ಇಲಾಖೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರತಿನಿಧಿಗಳು ಈ ಗುಂಪಿನ ಸದಸ್ಯರಾಗಿರುತ್ತಾರೆ. ಎಸ್ಬಿಐ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯ ಕಾಂತಿ ಘೋಷ್ ಅವರನ್ನು ಕೂಡ ಸದಸ್ಯರನ್ನಾಗಿ ನೇಮಿಸಲಾಗಿದೆ.
ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ, ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯೆ ಶಮಿಕಾ ರವಿ, ಕ್ರಿಸಿಲ್ನ ಮುಖ್ಯ ಅರ್ಥಶಾಸ್ತ್ರಜ್ಞ, ಧರ್ಮಕೀರ್ತಿ ಜೋಶಿ, ಕೊಟಕ್ ಮಹೀಂದ್ರಾ ಅಸೆಟ್ ಮ್ಯಾನೇಜ್ ಮೆಂಟ್ನ ಎಂಡಿ ನಿಲೇಶ್ ಶಾ ಮತ್ತು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ನ ಸಹ-ಮುಖ್ಯಸ್ಥ ಮತ್ತು ಅರ್ಥಶಾಸ್ತ್ರಜ್ಞ ಇಂದ್ರನಿಲ್ ಸೇನ್ ಗುಪ್ತಾ ಅಧಿಕಾರೇತರ ಸದಸ್ಯರಾಗಿದ್ದಾರೆ.
2022-23ರ ಮೂಲ ವರ್ಷದೊಂದಿಗೆ ಸೂಚನೆಗೆ ಉಲ್ಲೇಖ: ಆರ್ಥಿಕತೆಯ ರಚನಾತ್ಮಕ ಬದಲಾವಣೆಗಳ ಹಿನ್ನೆಲೆಯಲ್ಲಿ ಡಬ್ಲ್ಯುಪಿಐ ಮತ್ತು ಪಿಪಿಐ (ಉತ್ಪಾದಕ ಬೆಲೆ ಸೂಚ್ಯಂಕ) ಸರಕು ಪಟ್ಟಿಯನ್ನು 2022-23ರ ಮೂಲ ವರ್ಷದೊಂದಿಗೆ ಸೂಚಿಸುವುದು ಕಾರ್ಯಪಡೆಯ ಉಲ್ಲೇಖದ ನಿಯಮಗಳಾಗಿವೆ.
ಈ ತಂಡವು ಅಸ್ತಿತ್ವದಲ್ಲಿರುವ ಬೆಲೆ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿ ಸುಧಾರಣೆಗಾಗಿ ಬದಲಾವಣೆಗಳನ್ನು ಸೂಚಿಸಲಿದೆ. ಇದು ಡಬ್ಲ್ಯುಪಿಐ / ಪಿಪಿಐಗೆ ಅಳವಡಿಸಿಕೊಳ್ಳಬೇಕಾದ ಗಣನಾ ವಿಧಾನ ನಿರ್ಧರಿಸಲಿದೆ, ಬೆಲೆಗಳು ಹಾಗೂ ಜೀವನ ವೆಚ್ಚದ ಅಂಕಿ - ಅಂಶಗಳ ತಾಂತ್ರಿಕ ಸಲಹಾ ಸಮಿತಿಯು ಅನುಮೋದಿಸಿದ ಪಿಪಿಐ ಸಂಕಲನದ ವಿಧಾನವನ್ನು ಪರಿಶೀಲಿಸಲಿದೆ, ಸಂಕಲನ ಮತ್ತು ಪ್ರಸ್ತುತಿಯಲ್ಲಿ ಮತ್ತಷ್ಟು ಸುಧಾರಣೆಯನ್ನು ಸೂಚಿಸಲಿದೆ ಮತ್ತು ಡಬ್ಲ್ಯುಪಿಐನಿಂದ ಪಿಪಿಐಗೆ ಬದಲಾಯಿಸಲು ಮಾರ್ಗಸೂಚಿ ಶಿಫಾರಸು ಮಾಡಲಿದೆ.
ಕಾರ್ಯಪಡೆಯು ಇಲ್ಲಿಯವರೆಗೆ ಅಳವಡಿಸಿಕೊಂಡ ಲಿಂಕ್ ಅಂಶವನ್ನು ಗಣನೆ ಮಾಡುವ ವಿಧಾನವನ್ನು ಪರಿಶೀಲಿಸಿ ಅಗತ್ಯ ಇದ್ದರೆ ಲಿಂಕ್ ಅಂಶವನ್ನು ಗಣನೆ ಮಾಡುವ ವಿಧಾನದಲ್ಲಿ ಸೂಕ್ತ ಬದಲಾವಣೆಗಳನ್ನು ಸೂಚಿಸಲಿದೆ. ಇದಲ್ಲದೇ, ಡಬ್ಲ್ಯುಪಿಐ / ಪಿಪಿಐನ ವಿಶ್ವಾಸಾರ್ಹತೆ ಹೆಚ್ಚಿಸಲು ಅಗತ್ಯವಿರುವ ಯಾವುದೇ ಇತರ ಸುಧಾರಣೆಗಳ ಬಗ್ಗೆ ಕಾರ್ಯಪಡೆ ಸಲಹೆ ನೀಡಬಹುದು.
ಇದನ್ನೂ ಓದಿ : ಡಿಸೆಂಬರ್‌ನಲ್ಲಿ ₹1.76 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಕಳೆದ ವರ್ಷಕ್ಕಿಂತ ಶೇ.7.1ರಷ್ಟು ಏರಿಕೆ - GST COLLECTIONS IN DECEMBER