Green Peas Poori Recipe : ಹಸಿರು ಬಟಾಣಿಗಳು ಖಿಚಡಿ, ಉಪ್ಪಿಟ್ಟು, ಪಲಾವ್, ಬಿರಿಯಾನಿ ಮತ್ತು ಚಾಟ್ ಸೇರಿದಂತೆ ವಿವಿಧ ಖಾದ್ಯಕ್ಕೆ ಹೆಚ್ಚುವರಿ ಸುವಾಸನೆ ಹಾಗೂ ಆಕರ್ಷಕ ಬಣ್ಣ ನೀಡುತ್ತದೆ. ಹಸಿರು ಬಟಾಣಿಗಳು ಉತ್ತಮ ಆಹಾರವಾಗಿದೆ. ಚಳಿಗಾಲದಲ್ಲಿ ಬಟಾಣಿಗಳು ಹೆಚ್ಚು ದೊರೆಯುತ್ತವೆ. ಹಸಿರು ಬಟಾಣಿಗಳನ್ನು ಕೇವಲ ಭಕ್ಷ್ಯಗಳನ್ನು ಸಿದ್ಧಪಡಿಸಲು ಬಳಸುವ ಬದಲು ಪೂರಿಗಳನ್ನು ಸಹ ತಯಾರಿಸಬಹುದು.
ಇವುಗಳನ್ನು 'ಮಟರ್ ಪುರಿ' ಎಂದೂ ಕರೆಯುತ್ತಾರೆ. ಇದು ಪಂಜಾಬಿ ವಿಶೇಷ ರೆಸಿಪಿ. ಸಾಮಾನ್ಯವಾದ ಪೂರಿಗಳಿಗಿಂತಲೂ ಹೆಚ್ಚು ರುಚಿಯಾಗಿರುತ್ತವೆ. ಮತ್ತೆ ಮತ್ತೆ ಸೇವಿಸಬೇಕು ಅನಿಸುತ್ತದೆ. ಈ ಸ್ಟಫ್ಡ್ ಪೂರಿಗಳನ್ನು ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಸೂಪರ್ ಟೇಸ್ಟಿ ಪೂರಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳೇನು? ಸಿದ್ಧಪಡಿಸುವ ವಿಧಾನ ಹೇಗೆ ಎಂಬುದನ್ನು ವಿವರವಾಗಿ ತಿಳಿಯೋಣ.
ಮಟರ್ ಪೂರಿಗೆ ಅಗತ್ಯವಿರುವ ಪದಾರ್ಥಗಳು :
- ಗೋಧಿ ಹಿಟ್ಟು - 2 ಕಪ್
- ಹಸಿರು ಬಟಾಣಿ - 2 ಕಪ್
- ರವೆ - 3 ಟೀಸ್ಪೂನ್
- ಅಜವಾನ - ಅರ್ಧ ಟೀಸ್ಪೂನ್
- ಮೆಂತ್ಯ ಸೊಪ್ಪಿನ ಪುಡಿ - ಟೀಸ್ಪೂನ್
- ಗರಂ ಮಸಾಲ - ಟೀಸ್ಪೂನ್
- ಜೀರಿಗೆ - ಟೀಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
- ಬೆಳ್ಳುಳ್ಳಿ ಎಸಳು - 3
- ಹಸಿಮೆಣಸಿನಕಾಯಿ - 3
- ಶುಂಠಿ - 1 ಇಂಚಿನ ಪೀಸ್
- ಎಣ್ಣೆ - ಡೀಪ್ ಫ್ರೈ ಮಾಡಲು ಬೇಕಾಗುವಷ್ಟು
ಮಟರ್ ಪೂರಿ ತಯಾರಿಸುವ ವಿಧಾನ :
- ಮೊದಲು ಕಡಾಯಿಯನ್ನು ಒಲೆಯ ಮೇಲೆ ಇಡಿ. ಅದರೊಳಗೆ ಎರಡು ಟೀಸ್ಪೂನ್ ಎಣ್ಣೆ ಸೇರಿಸಿ. ಎಣ್ಣೆ ಸ್ವಲ್ಪ ಬಿಸಿಯಾದ ಬಳಿಕ ಜೀರಿಗೆ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಸಣ್ಣಗೆ ಹೆಚ್ಚಿದ ಶುಂಠಿ ಪೀಸ್ಗಳು ಹಾಗೂ ಹಸಿರು ಬಟಾಣಿಗಳನ್ನು ಒಂದಾದ ನಂತರ ಒಂದರಂತೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
- ಇವೆಲ್ಲವು ಬೆಂದ ಬಳಿಕ, ಮೆಂತ್ಯ ಎಲೆ ಪುಡಿ ಹಾಗೂ ಗರಂ ಮಸಾಲ ಸೇರಿಸಬೇಕಾಗುತ್ತದೆ. ಇನ್ನೊಂದು ನಿಮಿಷ ಫ್ರೈ ಮಾಡಿಕೊಂಡ ನಂತರ ಒಲೆ ಆಫ್ ಮಾಡಿ. ಇದಾದ ನಂತರ ಮಿಶ್ರಣವನ್ನು ಒಂದು ತಟ್ಟೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಬೇಕು.
- ಮಿಕ್ಸರ್ ಜಾರ್ ತೆಗೆದುಕೊಂಡು ತಣ್ಣಗಾದ ಹಸಿರು ಬಟಾಣಿ ಮಿಶ್ರಣವನ್ನು ಅದಕ್ಕೆ ಸೇರಿಸಿ, ಪೇಸ್ಟ್ ರೀತಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
- ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು, ರವೆ, ಅಜವಾನ, 2 ಚಮಚ ಎಣ್ಣೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಹಾಗೂ ಹಿಟ್ಟು ಮೃದುವಾಗುವವರೆಗೆ ಬೆರೆಸಿಕೊಳ್ಳಿ. ಹಿಟ್ಟು ಸಿದ್ಧವಾದ ಬಳಿಕ, ಹಿಟ್ಟನ್ನು ಹತ್ತು ಸಮಾನ ಭಾಗಗಳಾಗಿ ವಿಂಗಡಿಸಿ. ಈ ಹಿಟ್ಟಿನನ್ನು ಉಂಡೆಗಳನ್ನಾಗಿ ಮಾಡಬೇಕು.
- ಈಗ ಪ್ರತಿಯೊಂದು ಹಿಟ್ಟಿನ ಉಂಡೆಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಕೈಗಳಿಂದ ಬೆರೆಸಿ ಸಣ್ಣ ಬಟ್ಟಲು ಮಾಡಿಕೊಳ್ಳಿ. ನಂತರ ನೀವು ಈ ಹಿಂದೆ ಬೆರೆಸಿದ ಬಟಾಣಿ ಮಿಶ್ರಣವನ್ನು ಸ್ವಲ್ಪ ಸೇರಿಸಿ ಹಾಗೂ ಅಂಚುಗಳನ್ನು ಮುಚ್ಚಬೇಕಾಗುತ್ತದೆ.
- ಬಳಿಕ ಈ ಉಂಡೆಯನ್ನು ಚಪಾತಿ ಮಣೆಯ ಮೇಲೆ ಇರಿಸಬೇಕಾಗುತ್ತದೆ. ಅದರ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ ಹಾಗೂ ನಿಧಾನವಾಗಿ ಪೂರಿಯಂತೆ ತೀಡುವ ಮೂಲಕ ರೆಡಿ ಮಾಡಬೇಕಾಗುತ್ತದೆ. ಎಲ್ಲವನ್ನೂ ಈ ರೀತಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ.
- ಈಗ ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಿದ್ಧಪಡಿಸಿ ಇಟ್ಟ ಪೂರಿಯನ್ನು ಒಂದೊಂದಾಗಿ ಸೇರಿಸಿ ಹಾಗೂ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಬರುವರೆಗೆ ಹುರಿದುಕೊಳ್ಳಬೇಕಾಗುತ್ತದೆ. ಈಗ ಸೂಪರ್ ಟೇಸ್ಟಿ ಪಂಜಾಬಿ ಸ್ಪೆಷಲ್ ಮಟರ್ ಪೂರಿ ರೆಡಿ!
- ಕರಿಯೊಂದಿಗೆ ಈ ಪೂರಿ ಸೇವಿಸಬಹುದು ಇಲ್ಲವೇ, ಹಾಗೆ ತಿಂದರೂ ತುಂಬಾ ರುಚಿಕರವಾಗಿರುತ್ತವೆ. ನಿಮಗೆ ಇಷ್ಟವಾದರೆ ಒಮ್ಮೆ ಪ್ರಯತ್ನಿಸಿ ನೋಡಿ.