ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಕಾಂಗ್ರೆಸ್ ಯುವ ನಾಯಕ ಹಾಗೂ ಹಗರಣದ ಸೂತ್ರಧಾರಿ ಶ್ರೀಕಿ ಸ್ನೇಹಿತನಾಗಿದ್ದ ಮೊಹಮ್ಮದ್ ನಲಪಾಡ್ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಪ್ರಕರಣ ಸಂಬಂಧ ಫೆ.7 ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ವೈಯಕ್ತಿಕ ಕಾರಣಕ್ಕಾಗಿ ಇಂದೇ ಎಸ್ಐಟಿ ಮುಂದೆ ನಲಪಾಡ್ ಹಾಜರಾದರು. ಡಿವೈಎಸ್ಪಿ ಬಾಲರಾಜ್ ಅವರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಪ್ರಶ್ನೆಗೆ ನಲಪಾಡ್ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಬಂಧನವಾಗುವ ಭಯ ನನಗಿಲ್ಲ : ವಿಚಾರಣೆ ಮುಗಿಸಿ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಮೊಹಮ್ಮದ್ ನಲಪಾಡ್, ''ನಾಳೆ ವಿಚಾರಣೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಇಂದೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದೇನೆ. ನಾನು ಎಲ್ಲಿಯೂ ಓಡಿಹೋಗಿಲ್ಲ. ಪ್ರಕರಣದಲ್ಲಿ ಬಂಧನವಾಗುವ ಬಗ್ಗೆ ಭಯವಿಲ್ಲ. ಶ್ರೀಕಿ ಪರಿಚಯ ಕುರಿತ ತನಿಖಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇನೆ'' ಎಂದು ಹೇಳಿದರು.
''ಶ್ರೀಕಿ ನನ್ನ ತಮ್ಮನ ಮೂಲಕ ಪರಿಚಯವಾಗಿದ್ದ. ಇದುವರೆಗೂ ನನಗೂ ಹಾಗೂ ನನ್ನ ತಮ್ಮನಿಗೂ ಶ್ರೀಕಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿಲ್ಲ. ಕಾನೂನಿನ ಮೇಲೆ ಗೌರವವಿದೆ. ನಾನು ಎಲ್ಲಿಯೂ ಓಡಿಹೋಗಿಲ್ಲ'' ಎಂದು ಸ್ಪಷ್ಟಪಡಿಸಿದರು.
ಸಿಐಡಿಯ ಇ-ಪ್ರೊಕ್ಯೂರ್‌ಮೆಂಟ್ ಜಾಲತಾಣ ಹ್ಯಾಕ್ ಮಾಡಿ 1 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣ ಸಂಬಂಧ ಕಳೆದ ವರ್ಷ ಜೂನ್ 12ರಂದು ಮೊಹಮ್ಮದ್ ನಲಪಾಡ್ ಎಸ್ಐಟಿ ಮುಂದೆ ಹಾಜರಾಗಿದ್ದರು.
ಇದನ್ನೂ ಓದಿ: ಅದಾಯಕ್ಕಿಂತ ಹೆಚ್ಚು ಆಸ್ತಿಯಿರುವ ಜನಪ್ರತಿನಿಧಿಗಳ ಲೋಕಾಯುಕ್ತ ತನಿಖೆಗೆ ಕೋರಿದ್ದ ಅರ್ಜಿ ವಜಾ