ನವದೆಹಲಿ: "ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಕರಡು ತಿದ್ದುಪಡಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತಗಳನ್ನು ದೇಶದ ಮೇಲೆ ಹೇರುವುದಾಗಿದೆ" ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪಾದಿಸಿದರು.
ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶೈಕ್ಷಣಿಕ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ ಕರಡು ನಿಯಮಗಳಿಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ಡಿಎಂಕೆ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ "ಒಂದು ಇತಿಹಾಸ, ಒಂದು ಸಂಪ್ರದಾಯ, ಒಂದು ಭಾಷೆ" ಕಲ್ಪನೆಯನ್ನು ಜನರ ಮೇಲೆ ಹೇರುವುದಾಗಿದೆ ಎಂದು ಆರೋಪಿಸಿದರು.
ಸಂವಿಧಾನದ ಮೇಲಿನ ದಾಳಿ : "ದೇಶದ ಇತರ ಇತಿಹಾಸಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ನಿರ್ಮೂಲನೆ ಮಾಡುವುದು ಆರ್‌ಎಸ್‌ಎಸ್‌ನ ಗುರಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಾಥ್ ನೀಡುತ್ತಿದೆ. ಇದು ಸಂವಿಧಾನದ ಮೇಲಿನ ದಾಳಿಯಾಗಿದೆ" ಎಂದು ದೂರಿದರು.
"ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಂಪ್ರದಾಯ, ಇತಿಹಾಸ, ಭಾಷೆ ಹೊಂದಿದೆ. ಅದನ್ನು ಎಲ್ಲರೂ ಗೌರವಿಸಬೇಕು. ತಮಿಳುನಾಡು ಕೂಡ ತನ್ನದೇ ಭಾಷೆ, ಇತಿಹಾಸ ಹೊಂದಿದೆ. ಕೇಂದ್ರ ಸರ್ಕಾರವು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಆ ರಾಜ್ಯದ ಮೇಲೆ ಹೇರಲು ಬಯಸುತ್ತಿದೆ. ಈ ಮೂಲಕ ಇತರ ರಾಜ್ಯಗಳಿಗೂ ಅವಮಾನ ಮಾಡುತ್ತಿದೆ" ಎಂದು ಟೀಕಿಸಿದರು.
ರಾಜ್ಯಗಳ ಅಧಿಕಾರ ಮೊಟಕು : ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. "ರಾಜ್ಯ ಸರ್ಕಾರಗಳ ಎಲ್ಲಾ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರ ಬಯಸುತ್ತಿದೆ" ಎಂದು ಆರೋಪಿಸಿದರು.
"ರಾಜಕಾರಣಿಗಳನ್ನು ಕೈಗಾರಿಕೋದ್ಯಮಿಗಳ ಸೇವಕರನ್ನಾಗಿ ಮಾಡಲು ಮುಂದಾಗಿದೆ. ಹೊಸ ಶಿಕ್ಷಣ ನೀತಿಯನ್ನು ಎಂದಿಗೂ ಬೆಂಬಲಿಸಲು ಸಾಧ್ಯವಿಲ್ಲ. ನಮ್ಮ ಪಕ್ಷವು ಎನ್ಇಪಿಯನ್ನು ವಿರೋಧಿಸುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನೀತಿಗಳಿಗೆ ನಮ್ಮ ಬೆಂಬಲ ಇರಲಿದೆ" ಎಂದರು.
ಯುಜಿಸಿ ವಿರುದ್ಧ 6 ರಾಜ್ಯಗಳ ನಿರ್ಣಯ : ಕೇಂದ್ರ ಸರ್ಕಾರ ಯುಜಿಸಿ ನಿಯಮಗಳಿಗೆ ತಂದ ತಿದ್ದುಪಡಿಗಳನ್ನು ವಿರೋಧಿಸಿ 6 ಬಿಜೆಪಿಯೇತರ ರಾಜ್ಯಗಳು ನಿರ್ಣಯ ಅಂಗೀಕರಿಸಿವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳು ಯುಜಿಸಿ ಕರಡು ನಿಯಮಗಳ ವಿರುದ್ಧ 15 ಅಂಶಗಳ ನಿರ್ಣಯವನ್ನು ಅಂಗೀಕರಿಸಿವೆ.
ಇದನ್ನೂ ಓದಿ: ದೇಶಾದ್ಯಂತ ಹೊಸ ಶಿಕ್ಷಣ ನೀತಿ ಜಾರಿಗೆ ಎಲ್ಲ ಕ್ರಮ: ಯುಜಿಸಿ ಅಧ್ಯಕ್ಷ ಎಂ ಜಗದೀಶ