Belly Fat Reduction Tips : ಹಲವರು ಸುಂದರವಾಗಿ ಹಾಗೂ ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ತೆಳ್ಳಗಿನ ಸೊಂಟವನ್ನು ತಾವು ಹೊಂದಲು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಇದರಿಂದ ವ್ಯಾಯಾಮ ಹಾಗೂ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆಗಳ ಜೊತೆಗೆ ಹಲವು ಕಸರತ್ತುಗಳನ್ನು ಅನುಸರಿಸುತ್ತಾರೆ. ಆದರೆ, ಇವುಗಳ ಜೊತೆಗೆ ಕೆಲವು ಮಹತ್ವದ ಸಲಹೆಗಳನ್ನು ಅನುಸರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ವಿವರಿಸುತ್ತಾರೆ.
ಹೀಗಿರಲಿ ಊಟ : ತಜ್ಞರು ತಿಳಿಸುವ ಪ್ರಕಾರ, ಮಲಗುವ ಮೊದಲು ಅಂದ್ರೆ, ಕನಿಷ್ಠ ಎರಡು ಗಂಟೆಗಳ ಮುನ್ನ ಊಟ ಮುಗಿಸಬೇಕು. ಇದರಿಂದ ರಾತ್ರಿಯಲ್ಲಿ ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ. ದೇಹದಲ್ಲಿ ಹಾಗೂ ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಇದರ ಪರಿಣಾಮವಾಗಿ ನೀವು ತೆಳ್ಳಗಿನ ಸೊಂಟ ಹೊಂದಲು ಸಾಧ್ಯವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಯಾವ ಆಹಾರ ಸೇವಿಸಬೇಕು? ಸ್ಲಿಮ್ ಆಗಿರುವ ಸೊಂಟ ಹೊಂದಬೇಕಾದರೆ, ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಈ ಬದಲಾವಣೆಗಳನ್ನು ಮಾಡುವುದು ಉತ್ತಮ. ಈ ಸಂದರ್ಭದಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಬೇಕು. ಜಂಕ್ ಫುಡ್, ಕರಿದ ಆಹಾರಗಳು ಹಾಗೂ ಚಾಕೊಲೇಟ್‌ಗಳನ್ನು ಬದಿಗಿಟ್ಟು ಹಣ್ಣುಗಳು, ತರಕಾರಿಗಳು, ಮೊಟ್ಟೆಗಳು, ಮೀನು ಇತ್ಯಾದಿಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ನಮ್ಮ ದೇಹಕ್ಕೆ ಏಕಪರ್ಯಾಪ್ತ ಕೊಬ್ಬುಗಳು ಅತ್ಯಗತ್ಯ. ಅದಕ್ಕಾಗಿಯೇ ಒಣಹಣ್ಣುಗಳು ಮತ್ತು ಆವಕಾಡೊಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಕೊಬ್ಬುಗಳನ್ನು ಒದಗಿಸಬಹುದು. ಜೊತೆಗೆ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇರುವ ಬೀನ್ಸ್ ಮತ್ತು ವಿವಿಧ ಧಾನ್ಯಗಳನ್ನು ಸೇರಿಸುವುದರಿಂದ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುತ್ತದೆ. ಇದರಿಂದ ಆಹಾರ ಸೇವಿಸುವ ಹಂಬಲವನ್ನು ನಿಯಂತ್ರಿಸಬಹುದು ಹಾಗೂ ತೂಕವನ್ನು ನಿಯಂತ್ರಿಸಬಹುದು ಎಂದು ಅವರು ಸೂಚಿಸುತ್ತಾರೆ.
ವ್ಯಾಯಾಮ ಅವಶ್ಯ : ವ್ಯಾಯಾಮವು ತೂಕ ಇಳಿಸುವುದರಲ್ಲಿ ಮಾತ್ರವಲ್ಲದೆ ನಿಮ್ಮ ಸೊಂಟವನ್ನು ತೆಳ್ಳಗಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ವಾರದಲ್ಲಿ ಐದು ದಿನಗಳು ಪ್ರತಿದಿನ ಕನಿಷ್ಠ ಅರ್ಧ ಗಂಟೆ ಕಾರ್ಡಿಯೋ ವ್ಯಾಯಾಮ ಮಾಡುವ ಅಭ್ಯಾಸ ಮಾಡಬೇಕಾಗುತ್ತದೆ. ಬೆಳಗ್ಗೆ ಎದ್ದ ಬಳಿಕ ಕನಿಷ್ಠ 20 ನಿಮಿಷಗಳ ಕಾಲ ನಡೆಯಲು ಅಥವಾ ಓಡುವ ಅಭ್ಯಾಸ ಮಾಡಬೇಕಾಗುತ್ತದೆ. ಈ ವ್ಯಾಯಾಮಗಳು ನಮ್ಮನ್ನು ಕ್ರಿಯಾಶೀಲರನ್ನಾಗಿಸಲು ಸಹಾಯ ಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.
ನೃತ್ಯ, ಈಜು ಮತ್ತು ಸೈಕ್ಲಿಂಗ್ ಕೂಡ ಸೊಂಟದ ಸುತ್ತಲಿನ ಫ್ಯಾಟ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2019ರಲ್ಲಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ (International Journal of Obesity) ಪ್ರಕಟವಾದ 'ಅಧಿಕ ತೂಕ ಹಾಗೂ ಬೊಜ್ಜು ವಯಸ್ಕರಲ್ಲಿ ಒಳಾಂಗಗಳ ಕೊಬ್ಬಿನ ಮೇಲೆ ಏರೋಬಿಕ್ ವ್ಯಾಯಾಮದ ಪರಿಣಾಮಗಳು: ಒಂದು ವ್ಯವಸ್ಥಿತ ವಿಮರ್ಶ' (The Effects of Aerobic Exercise on Visceral Fat in Overweight and Obese Adults: A Systematic Review) ಎಂಬ ಅಧ್ಯಯನದಲ್ಲಿ ಸ್ಪಷ್ಟವಾಗಿ ತಿಳಿದಿದೆ. ಇದು ಹಾರ್ವರ್ಡ್ ಮೆಡಿಕಲ್ ಪಬ್ಲಿಷಿಂಗ್ ಅಧ್ಯಯನದಲ್ಲಿ ಇದೇ ವಿಷಯವು ಬಹಿರಂಗವಾಗಿದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು:
- https://pubmed.ncbi.nlm.nih.gov/23409182/
- https://www.health.harvard.edu/newsletter_article/taking-aim-at-belly-fat
ಓದುಗರಿಗೆ ವಿಶೇಷ ಸೂಚನೆ : ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.