ಬೆಳಗಾವಿ : 20 ವರ್ಷಗಳ ಹಿಂದೆ ಮೃತಪಟ್ಟ ಮಹಿಳೆ ಜೀವಂತ ಇರುವಂತೆ ನಕಲಿ ಮಹಿಳೆಯನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ಲಪಟಾಯಿಸಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಡಿಸಿಪಿ ರೋಹನ್ ಜಗದೀಶ್ ಅವರು ಮಾತನಾಡಿ, ಬೆಳಗಾವಿ ತಾಲೂಕಿನ ಬಾಚಿ ಗ್ರಾಮದ ಕಮಲಾಬಾಯಿ ಅಸಗಾಂವಕರ್ ಅವರ ಬಳಿ 8.30 ಎಕರೆ ಜಮೀನು ಇತ್ತು. ಈ ಜಮೀನು ಕಳೆದ 20 ವರ್ಷಗಳಿಂದ ಯಾರ ಹೆಸರಿಗೂ ವರ್ಗಾವಣೆ ಆಗಿರಲಿಲ್ಲ. ಜೊತೆಗೆ ಇದಕ್ಕೆ ಯಾರು ವಾರಸುದಾರರು ಇಲ್ಲ ಎಂಬುದನ್ನು ತಿಳಿದುಕೊಂಡ ಖತರ್ನಾಕ್ ಆರೋಪಿಗಳು ಕಮಲಾಬಾಯಿ ಅಸಗಾಂವಕರ್ ಅವರನ್ನ ಜೀವಂತ ಇರುವಂತೆ ಮರು ಸೃಷ್ಟಿ ಮಾಡಿ, ಜಮೀನನ್ನು ಸಾಗರ ಜಾಧವ್ ಎಂಬುವರಿಗೆ ವರ್ಗಾವಣೆ ಮಾಡಿದ್ದರು ಎಂದರು.
ಜಮೀನು ಬೇರೆಯವರ ಹೆಸರಿಗೆ ವರ್ಗಾವಣೆಯಾದ ವಿಚಾರ ತಿಳಿಯುತ್ತಿದ್ದಂತೆ ಅಸಗಾಂವಕರ್ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿತ್ತು. ಕೂಡಲೇ ಗ್ರಾಮೀಣ ಠಾಣೆಗೆ ದೌಡಾಯಿಸಿ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗಲೇ ಆರೋಪಿಗಳ ಬಣ್ಣ ಬಯಲಾಗಿದೆ. ಪ್ರಕರಣ ಸಂಬಂಧ ಜಮೀನು ಲಪಟಾಯಿಸಿದ ಆರೋಪಿಗಳಾದ ಕಡೋಲಿಯ ಶಾಂತಾ ನಾರ್ವೇಕರ್, ರಷೀದ್ ತಹಶೀಲ್ದಾರ್, ಮುತ್ಯಾನಟ್ಟಿಯ ಸುರೇಶ ಬೆಳಗಾವಿ, ಸಾಗರ ಜಾಧವ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.
2001 ರಲ್ಲಿ ಜಮೀನು ಒಡತಿ ನಿಧನ; 8.30 ಎಕರೆ ಜಮೀನಿನ ಒಡತಿಯಾಗಿದ್ದ ಕಮಲಾಬಾಯಿ ಅಸಗಾಂವ್ಕರ್ 2001ರ ಜುಲೈ 22ರಂದು ನಿಧನರಾಗಿದ್ದರು. ಅವರಿಗೆ 12 ಜನ ಮಕ್ಕಳು. ಈ ಎಲ್ಲಾ ಆಸ್ತಿ ಪುತ್ರ ವಿಜಯ್ ಅಸಗಾಂವಕರ್ ಅವರಿಗೆ ಸೇರಬೇಕು ಎಂದು ವಿಲ್ ಬರೆದು ಇಟ್ಟಿದ್ದರು. ದುರಾದೃಷ್ಟವಶಾತ್ ಕಮಲಾಬಾಯಿ ನಿಧನರಾದ ಎರಡೇ ವರ್ಷಗಳಲ್ಲಿ ಪುತ್ರ ವಿಜಯ್ ಸಹ ನಿಧನರಾಗಿದ್ದರು. ಆದರೆ, ತಾಯಿ ಹೆಸರಲ್ಲಿದ್ದ ಆಸ್ತಿ ಮಗನಿಗೆ ವರ್ಗಾವಣೆ ಆಗಿರಲಿಲ್ಲ.
ಇನ್ನು ಅತ್ತೆ ಕಮಲಾಬಾಯಿ ಹಾಗೂ ಪತಿ ವಿಜಯ ತೀರಿಹೋದ ಬಳಿಕ ಸೊಸೆ ವಿನುತಾ ಮುಂಬೈನಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಅತ್ತೆ ಹೆಸರಿನಲ್ಲಿ ಇದ್ದ ಜಮೀನು ಬೇರೆಯವರಿಗೆ ವರ್ಗಾವಣೆ ಆಗಿದೆ ಎನ್ನುವ ಮಾಹಿತಿ ಬರುತ್ತದೆ. ತಕ್ಷಣ ದಾಖಲೆ ತೆಗೆದು ನೋಡಿದಾಗ ಅವರು ಶಾಕ್ ಆಗುತ್ತಾರೆ. ಬಳಿಕ ವಿನುತಾ ಅವರು ಈ ಬಗ್ಗೆ ದೂರು ನೀಡಿದ್ದರು. ಮೃತ ಕಮಲಾಬಾಯಿ ಅವರನ್ನು ಮರು ಸೃಷ್ಟಿಸಿ, ಕಡೋಲಿ ಗ್ರಾಮದ ಶಾಂತಾ ನಾರ್ವೇಕರ್ ಅವರನ್ನೇ ಕಮಲಾಬಾಯಿ ಎಂದು ಬಿಂಬಿಸಿದ್ದರು. ನಕಲಿ ಆಧಾರ್ ಕಾರ್ಡ್, ನಕಲಿ ಸಹಿ ಮಾಡಿಸಿ ಕಮಲಾಬಾಯಿ ಜಮೀನನ್ನು ಆರೋಪಿಗಳು ವರ್ಗಾವಣೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಈಗಾಗಲೇ ದಸ್ತಗಿರಿ ಮಾಡಿದ್ದೇವೆ. ಮುಂದಿನ ತನಿಖೆ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಈ ಜಾಲದ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಜಮೀನಿಗೆ ಬಂಗಾರದ ಬೆಲೆ ಬಂದಿದ್ದು, ಈಗ ಈ ರೀತಿಯ ವಂಚನೆಯ ಜಾಲಗಳು ಸಕ್ರಿಯವಾಗಿವೆ. ಹಾಗಾಗಿ, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಅಲ್ಲದೇ ಇದರಲ್ಲಿ ಇನ್ನು ಯಾರು ಶಾಮೀಲಾಗಿದ್ದಾರೆ. ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಫೇಸ್‌ಬುಕ್‌ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ವಂಚನೆ ; ಮೈಸೂರಿನಲ್ಲಿದ್ದ 7 ಆರೋಪಿಗಳ ಬಂಧನ - FAKE ACCOUNT FRAUD