ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಜನಪ್ರತಿನಿಧಿಗಳ ಆಸ್ತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಮೂಲಗಳ ಕುರಿತು ಲೋಕಾಯುಕ್ತ ಸಂಸ್ಥೆಯಿಂದ ವಿಚಾರಣೆ ನಡೆಸುವುದಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರ ಆಸ್ತಿ ಮತ್ತದರ ಮೂಲಗಳ ಕುರಿತು ಲೋಕಾಯುಕ್ತ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ಗುರುನಾಥವಡ್ಡೆ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮನವಿ ಪರಿಗಣಿಸಲಾಗದು ಎಂದ ಹೈಕೋರ್ಟ್ : ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ. ಅರುಣ್ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು. ಅಲ್ಲದೆ, ಅರ್ಜಿಯಲ್ಲಿನ ಮನವಿಗಳನ್ನು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಸರ್ಕಾರಿ ನೌಕರರು ಹಾಗೂ ಜನಪ್ರತಿನಿಧಿಗಳ ಆಸ್ತಿಯ ಪ್ರಮಾಣ ಹೆಚ್ಚಾದಲ್ಲಿ ಅಂತಹವರ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿದೆ. ಸಾಮಾನ್ಯ ಆರೋಪಗಳ ಆಧಾರದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ವಕೀಲರ ವಾದವೇನು? ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ರಾಜ್ಯದಲ್ಲಿ ವಿಧಾನಸಭೆ, ವಿಧಾನಪರಿತ್ ಮತ್ತು ಲೋಕಸಭೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ. ಅವರ ಆಸ್ತಿ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಆದಾಯದ ಮೂಲ ಮತ್ತು ಆಸ್ತಿ ಹೊಂದಿರುವ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಪರಿಶೀಲಿಸದೆ ಮುಂದುವರೆಯಲು ಅವಕಾಶ ನೀಡಿದಲ್ಲಿ ವಿನಾಶಕ್ಕೆ ಕಾರಣವಾಗಲಿದೆ. ಮುಂದೊಂದು ದಿನ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಳ್ಳಬೇಕಾಗುತ್ತದೆ'' ಎಂದು ವಿವರಿಸಿದರು.
''ಅಲ್ಲದೆ, ಆದಾಯ ಹೆಚ್ಚಳವಾಗಿರುವ ಕುರಿತಂತೆ ಅನೇಕ ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ವಿಚಾರಣಾ ಹಂತದಲ್ಲಿಯೇ ಬಾಕಿ ಉಳಿದಿವೆ. ಜೊತೆಗೆ, ಈ ಕುರಿತಂತೆ ತನಿಖೆ ನಡೆಸಲು ಕೋರಿ ಲೋಕಾಯುಕ್ತ ಸಂಸ್ಥೆಗೆ ಅರ್ಜಿದಾರರು ಡಿಸೆಂಬರ್ 2003ರಲ್ಲಿ ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶನ ನೀಡಬೇಕು'' ಎಂದು ವಕೀಲರು ಕೋರಿದ್ದರು.
ಈ ಕುರಿತ ವಾದ ಆಲಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಇದನ್ನೂ ಓದಿ: ದೇಶವನ್ನು ರಕ್ಷಿಸುವ ರಕ್ಷಣಾ ಸಿಬ್ಬಂದಿಯನ್ನು ಸರ್ಕಾರದ ಸಂಸ್ಥೆಗಳು ಕನಿಷ್ಠ ಗೌರವದಿಂದಲಾದರೂ ನಡೆಸಿಕೊಳ್ಳಬೇಕು