ನವದೆಹಲಿ: ಕಾಂಗ್ರೆಸ್ ಪಕ್ಷವು ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ದ್ವೇಷ ಮತ್ತು ಕೋಪದ ಭಾವನೆಯನ್ನು ಹೊಂದಿದ್ದು, ಅನಿವಾರ್ಯವಾಗಿ ಅದು ಜೈ ಭೀಮ್ ಮಂತ್ರವನ್ನು ಜಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ದ್ವೇಷದ ಭಾವನೆ ಹೊಂದಿದ್ದರಿಂದಲೇ ಅದು ಅವರನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿತ್ತು ಎಂದರು.
"ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಎಷ್ಟು ಕೋಪ ಮತ್ತು ದ್ವೇಷದ ಭಾವನೆಯನ್ನು ಹೊಂದಿತ್ತು ಎಂಬುದನ್ನು ಚೆನ್ನಾಗಿ ದಾಖಲಿಸಲಾಗಿದೆ. ಅಂಬೇಡ್ಕರ್ ಅವರ ಮಾತುಗಳಿಂದ ಕಾಂಗ್ರೆಸ್ಗೆ ಕಿರಿಕಿರಿಯಾಗುತ್ತಿತ್ತು. ಈ ಕೋಪದಿಂದಾಗಿ, ಅವರು ಬಾಬಾ ಸಾಹೇಬ್ ಅವರನ್ನು ಎರಡು ಚುನಾವಣೆಗಳಲ್ಲಿ (1952, 1954) ಸೋಲಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಬಾಬಾ ಸಾಹೇಬ್ ಅವರನ್ನು ಭಾರತ ರತ್ನಕ್ಕೆ ಅರ್ಹರೆಂದು ಕಾಂಗ್ರೆಸ್ ಪರಿಗಣಿಸಲಿಲ್ಲ. ಇಂದು ಅನಿವಾರ್ಯವಾಗಿ ಅವರು 'ಜೈ ಭೀಮ್' ಘೋಷಣೆ ಕೂಗುತ್ತಿದ್ದಾರೆ. ಬಣ್ಣಗಳನ್ನು ಬದಲಾಯಿಸುವಲ್ಲಿ ಕಾಂಗ್ರೆಸ್ ನಿಪುಣವಾಗಿದೆ." ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಚುನಾಯಿತ ಸರ್ಕಾರಗಳನ್ನು ಕಾಂಗ್ರೆಸ್ ಅಸ್ಥಿರಗೊಳಿಸುತ್ತಿತ್ತು, ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುವ ಬದಲು ಇತರರ ಪ್ರಗತಿಗೆ ಅಡ್ಡಿಪಡಿಸುವಲ್ಲಿ ಅದು ನಿರತವಾಗಿದೆ ಎಂದು ಪ್ರಧಾನಿ ಆರೋಪಿಸಿದರು.
"ಕಾಂಗ್ರೆಸ್ ಸರ್ಕಾರಗಳನ್ನು ಅಸ್ಥಿರಗೊಳಿಸಿತು. 'ದುಸ್ರೆ ಕಿ ಲಕೀರ್ ಛೋಟಿ ಕರೋ (ಬೇರೆಯವನ್ನು ನಾಶಪಡಿಸುವುದು)' ಎಂಬುದೇ ಅವರ ಧ್ಯೇಯವಾಕ್ಯವಾಗಿದೆ. ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಪರ್ಕ ಹೊಂದಿರುವ ದೇಶದ ಹಳೆಯ ಪಕ್ಷಕ್ಕೆ ಇಂಥ ದುಃಸ್ಥಿತಿಯೇ? ಅವರು ತಮ್ಮ ಬಗ್ಗೆ ಯೋಚಿಸಿದ್ದರೆ, ಸಂಸತ್ತಿನಲ್ಲಿ ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಅವರಿಗೆ ಅವಕಾಶ ಸಿಗುತ್ತಿತ್ತು" ಎಂದು ಪ್ರಧಾನಿ ಮೋದಿ ಹೇಳಿದರು.
"ಇಂದು, ಸಮಾಜದಲ್ಲಿ ಜಾತಿ ವಿಷವನ್ನು ಹರಡುವ ಪ್ರಯತ್ನಗಳು ನಡೆಯುತ್ತಿವೆ... ಹಲವು ವರ್ಷಗಳಿಂದ, ಎಲ್ಲಾ ಪಕ್ಷಗಳ ಒಬಿಸಿ ಸಂಸದರು ಒಬಿಸಿ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನವನ್ನು ಒತ್ತಾಯಿಸುತ್ತಿದ್ದರು. ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಏಕೆಂದರೆ ಅದು ಕಾಂಗ್ರೆಸ್ನ ರಾಜಕೀಯಕ್ಕೆ ಸರಿಹೊಂದುವುದಿಲ್ಲ. ಆದರೆ ನಾವು ಈ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು. ನಂತರ ಸದನವು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯವನ್ನು ಅಂಗೀಕರಿಸಿತು.
ಇದನ್ನೂ ಓದಿ : ಗಡಿಪಾರಾದ ಭಾರತೀಯರಿಗೆ ಕೈಕೋಳ, ಸಂಕೋಲೆ ಬಿಗಿದ ಅಮೆರಿಕ : ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು? - JAISHANKAR ON DEPORTATION