ಬೆಂಗಳೂರು : "ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸವನ್ನು ಮಾಡಲಿ, ಆಮೇಲೆ ಮಾತಾಡಲಿ. ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಿಮಾನ ನಿಲ್ದಾಣವು ಬಿಡದಿ, ನೆಲಮಂಗಲ, ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನ ಮಾಡುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಇದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡುತ್ತಾರೆ. ಎರಡನೇ ವಿಮಾನ ನಿಲ್ದಾಣವನ್ನು ಇಂತಿಷ್ಟು ವರ್ಷಗಳ ಕಾಲ ನಿರ್ಮಾಣ ಮಾಡಬಾರದು ಎನ್ನುವ ಒಪ್ಪಂದವಿದೆ. ಇದನ್ನು ಆ ಎರಡು ಸಂಸ್ಥೆಗಳು ತೀರ್ಮಾನ ಮಾಡುತ್ತವೆ" ಎಂದರು.
"ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಸ್ಳಳ ಪರಿಶೀಲನೆ ನಡೆಯುತ್ತಿದೆ. ಅವರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಮಾತನಾಡಿ ಆನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
"ನಮ್ಮ ಊರಿನಲ್ಲಿ ವಿಮಾನ ನಿಲ್ದಾಣ ಬರಬೇಕು ಎನ್ನುವ ಆಸೆ ನನಗಿದೆ. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂದರೆ ಸಾಕಷ್ಟು ರೀತಿ, ರಿವಾಜುಗಳಿವೆ. ಗುಡ್ಡಗಳು ಇರಬಾರದು, ಫ್ಲೈಯಿಂಗ್ ಜೋನ್ ಇರಬೇಕು. ಹೀಗೆ ಸಾಕಷ್ಟು ನಿಯಮಗಳಿವೆ. ಅಲ್ಲದೇ ಒಟ್ಟು 4,400 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ" ಎಂದು ತಿಳಿಸಿದರು.
ಸುದೀಪ್ ಸೌಜನ್ಯಯುತ ಭೇಟಿ : ನಟ ಸುದೀಪ್ ಅವರ ಭೇಟಿಯ ವಿಚಾರವಾಗಿ ಪ್ರತಿಕ್ರಿಯಿಸಿ, ನಟ ಸುದೀಪ್ ಅವರದ್ದು ಸೌಜನ್ಯಯುತ ಭೇಟಿ. ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕೆ ಬಂದಿದ್ದರು. ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಒಬ್ಬ ಗೆಳೆಯರಾಗಿ ಬಂದು ಭೇಟಿಯಾಗಿದ್ದಾರೆ" ಎಂದರು.
ಇದನ್ನೂ ಓದಿ: ಜಿಟಿಡಿ ಅವರನ್ನು 15 ವರ್ಷಗಳಿಂದ ನೋಡಿದ್ದೇನೆ, ಅವರ ಕೋಪ ಎಷ್ಟೊತ್ತು? ಹೆಚ್.ಡಿ.ಕುಮಾರಸ್ವಾಮಿ