ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ, ಹೆಬ್ಬಾವು ಸೆರೆ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಚಿಕ್ಕಮಗಳೂರು : ಮಾವಿನ ಮರದ ಮೇಲೆ ಮಲಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಎನ್ಆರ್ ಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಸೆರೆ ಹಿಡಿಯಲಾಗಿದೆ. ಮಾವಿನ ಮರದ ಮೇಲೆ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ರಸ್ತೆಯಲ್ಲಿ ಹೋಗುವಾಗ ಸಾರ್ವಜನಿಕರು ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಉರಗ ತಜ್ಞ ಹರೇಂದ್ರ ಅವರನ್ನು ಸಾರ್ವಜನಿಕರು ಕರೆಸಿದ್ದು, ಮರದ ಕೊಂಬೆಯನ್ನು ಕಡಿದು, ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ನಂತರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.
ನಾಯಿಯನ್ನು ನುಂಗಿದ ಹೆಬ್ಬಾವು : ಮತ್ತೊಂದೆಡೆ ಎನ್ಆರ್ ಪುರ ತಾಲೂಕಿನ ಮಾವಿನ ಕುಡಿಗೆಯ ಗ್ರಾಮದ ಶ್ರೀಮತಿ ಎಂಬುವರ ಮನೆಯ ಸಮೀಪಕ್ಕೆ 13 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ಬಂದಿದೆ. ಈ ಸಂದರ್ಭದಲ್ಲಿ ನಾಯಿ ಬೊಗಳುವ ಶಬ್ದ ಮನೆಯವರಿಗೆ ಕೇಳಿದೆ. ನಂತರ ನಾಯಿ ಬೊಗಳುವುದನ್ನು ನಿಲ್ಲಿಸಿದ್ದು, ಮನೆಯವರು ಹೊರಗಡೆ ಬಂದಾಗ ಮನೆಯಿಂದ 50 ಅಡಿ ದೂರದ ಕಾಲುವೆಯಲ್ಲಿ ಹೆಬ್ಬಾವು ಮಲಗಿತ್ತು.
ಹೆಬ್ಬಾವಿನ ಬಾಯಿಯಲ್ಲಿ ನಾಯಿ ಬಾಲ ಮಾತ್ರ ಕಾಣುತ್ತಿತ್ತು. ನಾಯಿಯ ಇಡೀ ದೇಹವನ್ನು ಹೆಬ್ಬಾವು ನುಂಗಿತ್ತು. ತಕ್ಷಣ ಮನೆಯವರು ಅರಣ್ಯ ಅಧಿಕಾರಿ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಕುದುರೆ ಗುಂಡಿಯ ಉರಗ ತಜ್ಞ ಪಿ.ಜಿ ಹರೀಂದ್ರ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಹೆಬ್ಬಾವಿಗೆ ಪೆಟ್ಟಾಗದಂತೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಹೆಬ್ಬಾವು ಅಂದಾಜು 60 ರಿಂದ 70 ಕೆಜಿಯಷ್ಟು ತೂಕವಿರಬಹುದು ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ : 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ಸರ್ಪದ ಗಾತ್ರ ನೋಡಿ ಬೆಚ್ಚಿಬಿದ್ದ ಸ್ಥಳೀಯರು!