ಬೆಂಗಳೂರು: 2024ನೇ ವರ್ಷಕ್ಕೆ ವಿದಾಯ ಹೇಳುವ ಅಂಚಿನಲ್ಲಿ ನಾವಿದ್ದೇವೆ. ಇನ್ನೇನು ನಾಲ್ಕೈದು ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ 2024ರಲ್ಲಿ ಕನ್ನಡ ಭಾಷೆ, ಕನ್ನಡಿಗರಿಗೆ ಮೀಸಲಾತಿ ಹಾಗೂ ನಾಡಗೀತೆ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ಅಭಿಪ್ರಾಯಗಳು ಹೀಗಿವೆ.
ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಕನ್ನಡ ಮಾತನಾಡುವರು ಮತ್ತು ಬಳಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕದ ನಡುವೆ, ಕನ್ನಡ ಭಾಷೆ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ಸಲಹೆ ಸೂಚನೆಗಳಿವು.
- ಮಾತೃಭಾಷೆ ಕಲಿಕೆ ಕಡ್ಡಾಯವಾಗಬೇಕೆಂದು ಪ್ರತಿಪಾದಿಸಿದ್ದ ಕುವೆಂಪು ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಎಂಬುದಾಗಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುನ್ನು ಗುಜರಾತ್ ಹೈಕೋರ್ಟ್ನಿಂದ ರಾಜ್ಯ ಹೈಕೋರ್ಟ್‌ಗೆ ವರ್ಗಾವಣೆಯಾಗಿ ಬಂದಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರು ನ್ಯಾಯಾಲಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
- ನ್ಯಾಯಾಲಯದ ಆದೇಶಗಳು ಜನಸಾಮಾನ್ಯರಿಗೆ ತಿಳಿಯುವಂತಾಗಬೇಕು. ಮಾತೃಭಾಷೆಯಲ್ಲಿ ತೀರ್ಪುಗಳು ಹೊರಬಂದಲ್ಲಿ ಸಾಮಾನ್ಯರಿಗೂ ಅರ್ಥವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ಕನ್ನಡದಲ್ಲೇ ತೀರ್ಪು ಪ್ರಕಟಿಸಿ ಇತಿಹಾಸ ನಿರ್ಮಿಸಿದ್ದರು.
- ಕರ್ನಾಟಕದಲ್ಲಿ ವ್ಯವಹಾರ ನಡೆಸುತ್ತಿದ್ದು, ಕನ್ನಡ ಫಲಕ ಪ್ರದರ್ಶಿಸಲೇಬೇಕು ಎಂಬ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಅಂಗಡಿ ಮಾಲೀಕರ ವಿರುದ್ಧ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಕನ್ನಡ ಭಾಷೆಯಲ್ಲಿ ನಾಮಫಲಕ ವಿಚಾರದಲ್ಲಿ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳಿಗೂ ಸಮಾನ ಪಾಲು: 2024ರಲ್ಲಿ ಹೈಕೋರ್ಟ್ನ ಪ್ರಮುಖ ತೀರ್ಪುಗಳು
- ಕನ್ನಡ ಭಾಷೆಯು ಆಡಳಿತ ಭಾಷೆಯಾಗಬೇಕು ಎಂಬುದಾಗಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಈ ವಿಚಾರದಲ್ಲಿ ಸರ್ಕಾರದ ಪ್ರಾಧಿಕಾರಗಳು, ಅಧಿಕಾರಿಗಳು ಕನ್ನಡ ಭಾಷೆ ಬಳಸಿ ಪ್ರೋತ್ಸಾಹಿಸಬೇಕು ಎಂದು ಮೌಖಿಕ ಸಲಹೆ ನೀಡಿತ್ತು. ಆದರೆ, ಆಡಳಿತದಲ್ಲಿ ಕನ್ನಡ ಬಳಕೆ ಕುರಿತ ನಿರ್ದೇಶನ ನೀಡಲು ಕೋರಿದ್ದ ಮನವಿಯನ್ನು ತಿರಸ್ಕರಿಸಿತ್ತು.
- ರಾಜ್ಯದಲ್ಲಿರುವ ಕೈಗಾರಿಕೆಗಳು, ಕಾರ್ಖಾನೆಗಳು ಸೇರಿದಂತೆ ಉದ್ಯೋಗದಾತ ಸಂಸ್ಥೆಗಳಲ್ಲಿ ಸ್ಥಳೀಯರಿಗೆ (ಕನ್ನಡಿಗರಿಗೆ) ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ ಖಾಸಗಿ ಕಂಪನಿಗಳ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಕನ್ನಡಿಗರ ನೆಲ, ಜಲ ಪಡೆದು ಅವರಿಗೆ ಉದ್ಯೋಗ ನೀಡದಿದ್ದರೆ ಹೇಗೆ? ಎಂದು ಪ್ರಶ್ನಿಸಿತ್ತು. ಆದರೆ, ಈ ಕುರಿತು ಆದೇಶ ನೀಡಲು ನಿರಾಕರಿಸಿತ್ತು.
- ಮೈಸೂರು ಅನಂತಸ್ವಾಮಿ ಸಂಯೋಜನೆಯಲ್ಲಿ ನಾಡಗೀತೆ ಹಾಡಬೇಕು ಎಂಬ ಸರ್ಕಾರದ ಆದೇಶ ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್, ಇಂತಹದ್ದೇ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎಂದು ನಿರ್ದೇಶನ ನೀಡಲಾಗದು ಎಂದು ತಿಳಿಸಿತ್ತು.
ಇದನ್ನೂ ಓದಿ: 'ಖಾಸಗಿ ಪ್ರಯೋಗಾಲಯದಲ್ಲಿ ಧ್ವನಿ ಮಾದರಿ ಪರೀಕ್ಷೆ ನಡೆಸುವುದರಿಂದ ಆರೋಪಿಯ ಹಕ್ಕುಗಳ ಮೇಲೆ ಪರಿಣಾಮ'