ಬೆಂಗಳೂರು : ಸಾರ್ವಜನಿಕ ಆಸ್ತಿ ನಗದೀಕರಣಕ್ಕೆ ಅನುವು ಮಾಡಿಕೊಡುವ ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಕಾರ್ಯನೀತಿ 2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸುಸ್ಥಿರ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬೆಳವಣಿಗೆ ಮತ್ತು ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ವಿಸ್ತರಿಸಿ, ಅಭಿವೃದ್ಧಿಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಮಾದರಿಯಾಗಿ ಸ್ಥಾಪಿಸುವ ಉದ್ದೇಶದೊಂದಿಗೆ ಈ ಪಿಪಿಪಿ ಕಾರ್ಯನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯಲ್ಲಿ ವಿವಿಧ ವಲಯಗಳ ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಯಲ್ಲಿ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತದೆ.
ಆಸ್ತಿ ನಗದೀಕರಣ ಅಂಶ ಸೇರ್ಪಡೆ: ಪಿಪಿಪಿ ಕಾರ್ಯನೀತಿಯಲ್ಲಿ ಆಸ್ತಿ ನಗದೀಕರಣವನ್ನೂ ಸೇರಿಸಲಾಗಿದೆ. ಪ್ರಸಕ್ತ ಪಿಪಿಪಿ ಮಾದರಿ ಕೆಲ ಅಭಿವೃದ್ಧಿ ಕೆಲಸಗಳ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿದೆ. ಹೊಸ ಸಂಪನ್ಮೂಲ ಕ್ರೋಢೀಕರಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಪಿಪಿಪಿ ಕಾರ್ಯನೀತಿ ರೂಪಿಸಲಾಗಿದೆ. ಆಸ್ತಿ ನಗದೀಕರಣ ಖಾಸಗಿ ವಲಯದಲ್ಲಿನ ಪರಿಣತಿ ಹಾಗೂ ತಂತ್ರಜ್ಞಾನವನ್ನು ಬಳಕೆ ಮಾಡಲು ಅನುಕೂಲವಾಗಲಿದೆ. ಈಗಾಗಲೇ ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗಾಗಿ ಪಿಪಿಪಿ ಮೂಲಕ ಆಸ್ತಿ ನಗದೀಕರಣದ ಮೊರೆ ಹೋಗಲು ತೀರ್ಮಾನಿಸಿದೆ. ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಕೊರತೆ ಎದುರಿಸುತ್ತಿರುವ ಸರ್ಕಾರ ಇದೀಗ ಪಿಪಿಪಿ ಮೂಲಕ ಸರ್ಕಾರಿ ಆಸ್ತಿಗಳ ನಗದೀಕರಣದ ಮೂಲಕ ಮೂಲಸೌಕರ್ಯ ಅಭಿವೃದ್ಧಿ ಮಾಡಲು ತೀರ್ಮಾನಿಸಿದೆ.
ಮೂಲಸೌಲಭ್ಯ ಅಭಿವೃದ್ಧಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಪಿಪಿಪಿ ಮಾದರಿ ಹಾಗೂ ಆಸ್ತಿ ನಗದೀಕರಣ ಮೂಲಕ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗುವ ಎಲ್ಲ ಮೂಲಸೌಕರ್ಯ ಯೋಜನೆಗಳಿಗೆ ನೋಡಲ್ ಏಜೆನ್ಸಿಯಾಗಿದೆ. ಆಸ್ತಿ ನಗದೀಕರಣದಡಿ ಪಿಪಿಪಿ ಮೂಲಕ ಸಾರ್ವಜನಿಕ ಆಸ್ತಿಗಳನ್ನು ಗುತ್ತಿಗೆ ಅಥವಾ ಭಾಗಶಃ ಖಾಸಗಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಸಾರ್ವಜನಿಕ ಮೂಲಸೌಕರ್ಯ ಆಸ್ತಿಗಳಾದ ರಸ್ತೆ, ಕಟ್ಟಡ ಮುಂತಾದುವುಗಳನ್ನು ಗುತ್ತಿಗೆ ನೀಡಲಾಗುತ್ತದೆ. ಇದರಿಂದ ಆಸ್ತಿಗಳ ಮೌಲೀಕರಣ ಮಾಡುವ ಮೂಲಕ ಆದಾಯ ಸಂಗ್ರಹವಾಗಲಿದೆ. ಇದು ಖಾಸಗಿ ಸಂಸ್ಥೆಗಳಿಗೆ ಸಾರ್ವಜನಿಕ ಆಸ್ತಿಗಳ ನಿರ್ವಹಣೆಗೆ ಅನುವು ಮಾಡಿಕೊಡಲಿದೆ. ಸರ್ಕಾರ ಆಸ್ತಿಯ ಮಾಲಿಕತ್ವ ಹೊಂದಿರಲಿದೆ ಹಾಗೂ ಸಂಗ್ರಹಿತ ಆದಾಯದ ಲಾಭದ ಪಾಲು ಹೊಂದಿರಲಿದೆ. ಇದು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿರ್ವಹಣೆಗೆ ಪೂರಕವಾಗಲಿದೆ.
ಟೆಂಡರ್ ವೇಳೆ ಸರ್ಕಾರದ ಏಜೆನ್ಸಿಗಳು ಅಥವಾ ಯೋಜನೆ ಅನುಷ್ಠಾನ ಪ್ರಾಧಿಕಾರಗಳು ಶೇ 90 ಅಡವಿಡದ ಭೂಮಿಯ ಲಭ್ಯತೆಯನ್ನು ಖಾತ್ರಿ ಪಡಿಸಬೇಕು. ರಾಜ್ಯ ಮಟ್ಟದ ಏಕಗವಾಕ್ಷಿ ಏಜೆನ್ಸಿ/ಮಂಜೂರಾತಿ ಸಮಿತಿಗಳ ಸಮ್ಮತಿಯಂತೆ ಕೇಸ್ ಟು ಕೇಸ್ ಆಧಾರದಲ್ಲಿ ಇದಕ್ಕೆ ವಿನಾಯಿತಿ ನೀಡಬಹುದಾಗಿದೆ.
ಇದನ್ನೂ ಓದಿ : ಬಿಡದಿ, ಹಾರೋಹಳ್ಳಿಯಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಉಪನಗರ ಯೋಜನೆಗೆ ಸಂಪುಟ ಅಸ್ತು - SATELLITE TOWNSHIP