ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಬ್ಲಾಕ್ಬಸ್ಟರ್ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಧಾರ್ಮಿಕ ಪ್ರವಾಸದಲ್ಲಿ ನಟಿ ಜೊತೆ ಅವರ ತಂದೆಯೂ ಇದ್ದರು.
ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ಹಲವು ಫೋಟೋ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಅತ್ಯುತ್ತಮ ಕ್ಷಣಗಳನ್ನು ಸೆರೆಹಿಡಿಯಲಾಗಿದೆ. ಫೋಟೋಗಳಲ್ಲಿ, ನಟಿ ಪವಿತ್ರ ಸ್ನಾನಕ್ಕಾಗಿ ತ್ರಿವೇಣಿ ಸಂಗಮದ ಕಡೆಗೆ ಪ್ರಯಾಣಿಸಿರುವುದನ್ನು ಕಾಣಬಹುದು. ಸೇಫ್ಟಿ ಜಾಕೆಟ್ ಧರಿಸಿ ದೋಣಿ ಮೇಲೆ ಕುಳಿತಿರುವುದು ಕಂಡು ಬಂದಿದೆ.
ಫೋಟೋಗಳನ್ನು ಹಂಚಿಕೊಂಡ ಸ್ಟಾರ್ ನಟಿ, "ನಿಜಕ್ಕೂ ಪ್ರಯಾಗ್‌ರಾಜ್ ನನ್ನನ್ನು ಕರೆದಂತೆ ಭಾಸವಾಗುತ್ತಿದೆ. ಆರಂಭದಲ್ಲಿ ಯಾವುದೇ ಐಡಿಯಾಗಳಾಗಲಿ ಅಥವಾ ಪ್ಲಾನ್ಸ್ ಇರಲಿಲ್ಲ. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ನಂತರ, ಒಂದು ವಿಷಯ ಮತ್ತೊಂದಕ್ಕೆ ಕಾರಣವಾಯಿತು. ಫ್ಲೈಟ್ ಟಿಕೆಟ್ ಬುಕ್ ಮಾಡಿದೆ. ಬ್ಯಾಗ್ ಪ್ಯಾಕ್ ಮಾಡಿದೆ. ಇದೀಗ ಇಲ್ಲಿದ್ದೇನೆ. ಲಕ್ಷಾಂತರ ಜನರ ನಡುವೆ ದಾರಿ ಹುಡುಕುತ್ತಿದ್ದೆ. ನನ್ನ ತಂದೆ ಬಹಳ ಸಂತೋಷದಿಂದ ನನ್ನ ಎಲ್ಲಾ ಪ್ಲ್ಯಾನ್ಸ್ಗೆ ಸಾಥ್ ಕೊಟ್ಟರು. ಇದು ನಿಜವಾಗಿಯೂ ಅನೇಕ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಾಧ್ಯವಾಗೋದು. ಹಾಗಾಗಿ, ಯಾವುದೇ ಪ್ರಶ್ನೆಗಳಿರಲಿಲ್ಲ. ಒಂದೊಳ್ಳೆ ಅನುಭವ ಮತ್ತು ಜೀವನಪರ್ಯಂತಕ್ಕೆ ಸೃಷ್ಟಿಯಾದ ನೆನಪು" ಎಂದು ಬರೆದುಕೊಂಡಿದ್ದಾರೆ.
'ಕೆಜಿಎಫ್' ನಟಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ತಾರೆಯ ಪೋಸ್ಟ್ ಅಭಿಮಾನಿಗಳ ಪ್ರೀತಿ ಸ್ವೀಕರಿಸಿದೆ.
ಇದನ್ನೂ ಓದಿ: ಮಹಿಳಾ ಅಭಿಮಾನಿಗೆ ಮತ್ತೆ ಮುತ್ತಿಟ್ಟ ಗಾಯಕ ಉದಿತ್ ನಾರಾಯಣ್: ವಿಡಿಯೋ ವೈರಲ್
ಜನವರಿ 13, 2025ರಂದು ಪ್ರಾರಂಭವಾದ ಮಹಾಕುಂಭಮೇಳ, ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸೇರುವಿಕೆಯಾಗಿದ್ದು, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತಿದೆ. ಫೆಬ್ರವರಿ 26ರ ಮಹಾಶಿವರಾತ್ರಿವರೆಗೆ ಮಹಾಕುಂಭಮೇಳ ಮುಂದುವರಿಯಲಿದೆ. ಈಗಾಗಲೇ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಿ ಧನ್ಯರಾಗಿದ್ದಾರೆ. ಸೆಲೆಬ್ರಿಟಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪವಿತ್ರ ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಒದಗಿಸಿರುವ ದತ್ತಾಂಶದ ಪ್ರಕಾರ, ಜನವರಿ 14ರಿಂದ ಫೆ.4ರವರೆಗೆ 382 ಮಿಲಿಯನ್ ಜನರು ಪುಣ್ಯ ಸ್ನಾನ ಮಾಡಿದ್ದಾರೆ.
ಇದನ್ನೂ ಓದಿ: ಬಿಡುಗಡೆ ದಿನವೇ ಲೀಕ್ ಆಯ್ತು ಅಜಿತ್ ಕುಮಾರ್ 'ವಿಡಾಮುಯರ್ಚಿ'
ಪುಷ್ಯ ಪೂರ್ಣಿಮೆಯಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ ಇದೇ ಫೆಬ್ರವರಿ 5, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಬೋಟ್ ಮೂಲಕ ಯುಮುನಾ ನದಿಯಲ್ಲಿ ತೆರಳಿದ ಪಿಎಂ, ಪವಿತ್ರ ಸ್ನಾನ ಮಾಡಿ, ಗಂಗಾಮಾತೆಗೆ ನಮಿಸಿದರು.