ಬೆಳ್ತಂಗಡಿ(ದಕ್ಷಿಣ ಕನ್ನಡ): ವಿದ್ಯಾರ್ಥಿಗಳೇ ನೇಜಿ ನಾಟಿ ಮಾಡಿದ ಸುಮಾರು ಐದು ಎಕರೆ ಗದ್ದೆಯ ಭತ್ತ ಕಟಾವು ಕಾರ್ಯ ವಿಜೃಂಭಣೆಯಿಂದ ಸಂಪ್ರದಾಯಬದ್ಧವಾಗಿ ಫೆಬ್ರವರಿ 09 ರಂದು ನಡೆಯಲಿದೆ.
ಬದುಕು ಕಟ್ಟೋಣ ಬನ್ನಿ ವಿಶೇಷ ಕಾರ್ಯಕ್ರಮ: ಯುವ ಜನತೆಯನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಬೆಳ್ತಂಗಡಿಯ 'ಬದುಕು ಕಟ್ಟೋಣ ಬನ್ನಿ' ತಂಡ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. "ಯುವ ಸಿರಿ ರೈತ ಭಾರತದ ಐಸಿರಿ" ಎಂಬ ಕಾರ್ಯಕ್ರಮದಡಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಳಾಲು ಸಮೀಪದ ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ಬಳಿಯ ಸುಮಾರು 5 ಎಕರೆ ಹಡೀಲು ಬಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಯುವ ಜನತೆ ಸೇರಿಕೊಂಡು ಸುಮಾರು 1,500 ಮಂದಿ ನೇಜಿ ನಾಟಿ ಮಾಡಿ ಮಾದರಿ ಕಾರ್ಯಕ್ರಮವಾಗಿ ಮೂಡಿಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಸಾವಿರ ವಿದ್ಯಾರ್ಥಿಗಳು: ಇದೀಗ ಫೆಬ್ರವರಿ 09 ಭಾನುವಾರ ಭತ್ತ ಕಟಾವು ಕಾರ್ಯಕ್ರಮವು ಒಂದು ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆಯ ಮೂಲಕ ವಿಜೃಂಭಣೆಯಿಂದ ನಡೆಯಲಿದೆ.
ಕೃಷಿಯಿಂದ ವಿಮುಖರಾಗುತ್ತಿರುವ ಯುವ ಜನರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು, ಕೃಷಿಯ ಮಹತ್ವ ಅವರಿಗೂ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ 500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸೇರಿ 1,500 ಮಂದಿ ಒಟ್ಟಾಗಿ ಸೇರಿ ನೇಜಿ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಕ್ಕಿ ದೇವಸ್ಥಾನಕ್ಕೆ, ಹುಲ್ಲು ಗೋಶಾಲೆಗೆ: ಫೆಬ್ರವರಿ 09 ಭಾನುವಾರ ಭತ್ತ ಕಟಾವು ನಡೆಯಲಿದ್ದು ಇದನ್ನೂ ಕೂಡ ವಿದ್ಯಾರ್ಥಿಗಳು, ಯುವ ಜನತೆ ಮಾಡಲಿದ್ದಾರೆ, ಅದಲ್ಲದೇ ಭತ್ತವನ್ನು ದೇವಸ್ಥಾನದ ವಠಾದಲ್ಲಿ ಬೇರ್ಪಡಿಸಿ ಅಕ್ಕಿ ತಯಾರಿಸಿ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ನೈವೇದ್ಯಕ್ಕಾಗಿ ಕೊಡಲಾಗುವುದು. ಬೈ ಹುಲ್ಲನ್ನು ಗೋಶಾಲೆಗೆ ನೀಡಲಾಗುವುದು.
ಕೃಷಿಯ ಬಗ್ಗೆ ಯುವ ಜನತೆಗೆ ಅರಿವು ಮೂಡಿಸುವ ಕೆಲಸ, ಸ್ವಚ್ಚತಾ ಕಾರ್ಯ, ವಿವಿಧ ಕನ್ನಡ ಸರ್ಕಾರಿ ಶಾಲೆಗಳ ದುರಸ್ತಿ ಕೆಲಸ ಸೇರಿದಂತೆ ಹತ್ತಾರು ಸಮಾಜ ಮುಖಿ ಸೇವಾ ಯೋಜನೆಗಳು ಬದುಕು ಕಟ್ಟೋಣ ಬನ್ನಿ ತಂಡ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಾಡುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ 'ಹೆಲ್ಮೆಟ್ ಧರಿಸಿ ಜೀವ ಉಳಿಸಿ': ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ