ಚಾಮರಾಜನಗರ: ಕೇರಳದ ಮಾಜಿ ರಾಜ್ಯಪಾಲ ಹಾಗೂ ಸಿಎಂ ಸಿದ್ದರಾಮಯ್ಯಗೆ ರಾಜಕೀಯ ಗುರುವಾಗಿದ್ದ ದಿವಂಗತ ಬಿ. ರಾಚಯ್ಯ ಅವರ ಪತ್ನಿ ಗೌರಮ್ಮ ಇಂದು ನಿಧನರಾಗಿದ್ದಾರೆ. ಇವರು ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರ ಮಾತೃಶ್ರೀಯವರಾಗಿದ್ದರು.
ಸುಮಾರು 90 ವರ್ಷ ವಯಸ್ಸಿನ ಗೌರಮ್ಮ ಅವರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಬೆಳಗ್ಗೆ 9 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಸ್ವಗ್ರಾಮ ಚಾಮರಾಜನಗರದ ಆಲೂರಿನಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
![FORMER KERALA GOVERNOR LATE RACHAIAH'S WIFE PASSES AWAY](https://etvbharatimages.akamaized.net/etvbharat/prod-images/07-02-2025/23492235_rat.jpg)
ಕೆಲವು ತಿಂಗಳ ಹಿಂದೆ ಆಲೂರಿನಲ್ಲಿ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟನೆಯಾಗಿತ್ತು. ಸ್ಮಾರಕ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸಿದ್ದರು. ಆ ವೇಳೆ, ಸುಧೀರ್ಘವಾಗಿ ಹಿಂದಿನ ನೆನಪು ಮೆಲುಕು ಹಾಕಿದ ಸಿದ್ದರಾಮಯ್ಯ ಬಿ.ರಾಚಯ್ಯ ಅವರನ್ನು ತನ್ನ ರಾಜಕೀಯ ಗುರು ಎಂದು ನೆನೆದಿದ್ದರು. ವೇದಿಕೆಯಲ್ಲೇ ಇದ್ದ ಗೌರಮ್ಮ ಅವರ ಕೈರುಚಿಯನ್ನು ಸ್ಮರಿಸಿದ್ದರು.
ನಾಳೆ ನೆರವೇರಲಿದೆ ಅಂತ್ಯಸಂಸ್ಕಾರ: ಮೈಸೂರಿನ ಸರಸ್ವತಿಪುರಂ ನಲ್ಲಿರುವ 9ನೇ ಮುಖ್ಯ ರಸ್ತೆಯಲ್ಲಿರುವ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಇಂದು ಮಧ್ಯಾಹ್ನ 3 ಗಂಟೆ ವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಅಂತ್ಯಸಂಸ್ಕಾರ ಅವರ ಸ್ವಂತ ಗ್ರಾಮವಾದ ಚಾಮರಾಜನಗರ ತಾಲೂಕಿನ ಆಲೂರಿನಲ್ಲಿ ನಾಳೆ(ಶನಿವಾರ) ಮಧ್ಯಾಹ್ನ ನೆರವೇರಲಿದೆ.
ಮೃತರು ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು, ಅಳಿಯ ನಿವೃತ್ತ ಪೊಲೀಸ್ ಅಧಿಕಾರಿ ಮರಿಸ್ವಾಮಿ ಸೇರಿದಂತೆ 7 ಮಂದಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಮಾಜಿ ರಾಜ್ಯಪಾಲ ಬಿ. ರಾಚಯ್ಯ ಸ್ಮಾರಕ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ - Rachaiah Memorial inauguration