ಬೆಂಗಳೂರು : ವಾಣಿಜ್ಯ ನ್ಯಾಯಾಲಯಗಳ ವಿಚಾರಣಾ ಪ್ರಕ್ರಿಯೆಯನ್ನು ಇ-ಮೇಲ್ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿಗೊಳಿಸಲು ಅವಕಾಶ ನೀಡುವ ನಿಯಮಗಳ ತಿದ್ದುಪಡಿ ಕುರಿತಾಗಿ ಈ ಹಿಂದೆ ನ್ಯಾಯಪೀಠ ಮಾಡಿದ್ದ ಶಿಫಾರಸ್ಸಿನ ಸ್ಥಿತಿಗತಿ ಬಗ್ಗೆ ಫೆ. 25 ರೊಳಗೆ ವರದಿ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಇ-ಮೇಲ್ ಮೂಲಕ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡುವ ಸಂಬಂಧ ಅನುಮೋದಿಸುಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಅನಿರುದ್ಧ ಸುರೇಶ್ ಎಂಬುವವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಜತೆಗೆ ಪ್ರಕರಣ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ಹೊರಡಿಸಿದ್ದ ಆದೇಶ ಪ್ರತಿಯನ್ನು ಹೆಚ್ಚುವರಿ ಸರ್ಕಾರಿ ವಕೀಲರಿಗೆ ನೀಡಲಾಗುತ್ತಿದ್ದು, ಈ ಬಗ್ಗೆ ಸರ್ಕಾರ ಮರು ಪರಿಶೀಲಿಸಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ತಿಳಿಸಿದ್ದು ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದೆ.
ಈ ವೇಳೆ ಅರ್ಜಿದಾರರು 2024ರ ಮಾ.15 ರಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅರ್ಜಿಗೆ ಸಂಬಂಧಿಸಿದ ವಿಚಾರವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರುವ ಕುರಿತಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಲಯವು ಇಮೇಲ್ ಮೂಲಕ ನೋಟಿಸ್ ಅಥವಾ ಸಮನ್ಸ್ ಸೇವೆಗೆ ಸಂಬಂಧಿಸಿದಂತೆ ನಿಯಮಗಳ ಅನುಮೋದನೆಯ ವಿಚಾರವಾಗಿ ಸೂಚನೆ ಪಡೆಯಲು ಹಲವಾರು ನಿರ್ದೇಶನಗಳನ್ನು ನೀಡಲಾಯಿತು. ಆದರೆ, ಇಲ್ಲಿಯವರೆಗೆ ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ರಾಜ್ಯಪಾಲರಿಂದ ನಿಯಮಗಳನ್ನು ಅಂಗೀಕರಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಣೆ ನೀಡಿದರು.
ವಾದ ಆಲಿಸಿದ ನ್ಯಾಯಪೀಠ, ಇ-ಮೇಲ್ ಮೂಲಕ ನೋಟಿಸ್ ಜಾರಿ ನಿಯಮಗಳನ್ನು ತುರ್ತಾಗಿ ಅನುಮೋದಿಸುವ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರ ತಿಳಿಸಬೇಕು ಎಂದು ಸೂಚಿಸಿದೆ.