ಬೆಂಗಳೂರು: ನಗರದ ಕಾಡುಗೋಡಿಯ ಜನನಿ ಪಬ್ಲಿಕ್ ಶಾಲೆಯ 18 ಮಂದಿ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ 10ನೇ ತರಗತಿಯ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದ್ದ ಏಕಸದಸ್ಯ ಪೀಠದ ಮಧ್ಯಂತರ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್, ಈ ಆದೇಶವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿದೆ.
ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠ ಈ ಆದೇಶ ನೀಡಿತು.
ಅಲ್ಲದೆ, ಸಿಬಿಎಸ್‌ಇ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಜೊತೆಗೆ, 18 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಹಾಜರಾಗುವುದಕ್ಕೆ ಅನುಮತಿ ನೀಡಿರುವ ಸಂಬಂಧ ಅಂತಿಮ ಆದೇಶದಲ್ಲಿ ವಿದ್ಯಾರ್ಥಿಗಳಿಗೆ ವ್ಯತಿರಿಕ್ತ ಆದೇಶ ಬಂದಲ್ಲಿ 18 ಮಂದಿ ಮಕ್ಕಳು ಶಾಲೆಯ ವಿರುದ್ಧ ಸೂಕ್ತ ವೇದಿಕೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿರುವ ಹಾಗೂ ಈ ಮೇಲ್ಮನವಿ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಜನನಿ ಪಬ್ಲಿಕ್ ಶಾಲೆ 2025-26ನೇ ಸಾಲಿನಿಂದ ಅನುಮತಿ ಕೋರಿ ಸಿಬಿಎಸ್‌ಇಗೆ ಮನವಿ ಮಾಡಿದೆ. ಈ ಅಂಶವನ್ನು ನ್ಯಾಯಪೀಠ ಮುಂದೆ ಗಮನಿಸಲಿದೆ. ಆದರೆ, ಪ್ರಸಕ್ತ ವರ್ಷಕ್ಕೆ (2025-26) ಅನುಮತಿ ಇಲ್ಲದೆಯೂ 18 ಮಕ್ಕಳಿಗೆ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಆದೇಶ ನೀಡಲಾಗಿದೆ ಎಂದು ಪೀಠ ಹೇಳಿದೆ.
ವಕೀಲರ ವಾದ: ವಿಚಾರಣೆ ವೇಳೆ ಸಿಬಿಎಸ್‌ಇ ಪರ ವಕೀಲರು, ''ಜನನಿ ಶಾಲೆಯ 18 ಮಂದಿ ವಿದ್ಯಾರ್ಥಿಗಳು 9ನೇ ತರಗತಿಯವರೆಗೂ ರಾಜ್ಯ ಮಂಡಳಿ ಪಠ್ಯಕ್ರಮದಲ್ಲಿ ಅಧ್ಯಯನ ನಡೆಸಿದ್ದಾರೆ. ಹೀಗಾಗಿ, 10ನೇ ತರಗತಿಗೆ ಸಿಬಿಎಸ್‌ಸಿ ಪರೀಕ್ಷೆಗೆ ಹಾಜರಾಗುವುದಕ್ಕೆ ಅವಕಾಶವಿಲ್ಲ. ಶಾಲೆ 2026ನೇ ಸಾಲಿನಿಂದ ಸಿಬಿಎಸ್‌ಇಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮಾತ್ರ ಸಿಬಿಎಸ್‌ಇ ಪರೀಕ್ಷೆಗಳಿಗೆ ಹಾಜರಾಗುವುದಕ್ಕೆ ಅವಕಾಶವಿರಲಿದೆ'' ಎಂದು ಪೀಠಕ್ಕೆ ವಿವರಿಸಿದರು.
''ಅಲ್ಲದೆ, ನ್ಯಾಯಾಲಯದ ಈ ಆದೇಶದಿಂದ ಈ ವಿದ್ಯಾರ್ಥಿಗಳಯ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಅಧ್ಯಯನ ಮಾಡದಿದ್ದರೂ ಪರೀಕ್ಷೆಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.
''ಜನನಿ ಶಾಲೆಯ ಪರ ವಕೀಲರು, ನಮ್ಮ ಕಕ್ಷಿದಾರ ಶಾಲೆಗೆ ಸ್ವಿಚ್ ಓವರ್ ವಿಭಾಗದಲ್ಲಿ ಮಾನ್ಯತೆಯಿದೆ. ಶಾಲೆಯಲ್ಲಿ 18 ಮಂದಿ ಸಿಬಿಎಸ್‌ಇ ಪಠ್ಯಕ್ರಮ ಆರಿಸಿಕೊಂಡಿದ್ದಾರೆ, ಅವರಿಗೆ ಈಗಾಗಲೇ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವುದೇ ಹೊಸ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಲ್ಲ. ಈ ವಿದ್ಯಾರ್ಥಿಗಳಿಗೆ ರಾಜ್ಯ ಮಂಡಳಿ ಪಠ್ಯಕ್ರಮದ ಪರೀಕ್ಷೆಗೆ ಹಾಜರಾಗುವುದಕ್ಕೆ ಅವಕಾಶವಿಲ್ಲ. ಆದರೆ, ಸಿಬಿಎಸ್‌ಇ ನಿಯಮಗಳ ಪ್ರಕಾರ 10ನೇ ತರಗತಿಗೆ ನೇರ ಪ್ರವೇಶಕ್ಕೆ ಅವಕಾಶವಿದೆ'' ಎಂದು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಸಿಬಿಎಸ್‌ಇಯಿಂದ ಅನುಮತಿ ಇಲ್ಲದೆ 18 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡುವಂತೆ ಜನನಿ ಪಬ್ಲಿಕ್ ಶಾಲೆ ಮನವಿ ಮಾಡಿತ್ತು. ಈ ಮನವಿಯನ್ನು ಸಿಬಿಎಸ್‌ಇ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, 2025ರ ಫೆಬ್ರವರಿ 15ರಿಂದ ನಡೆಯುವ 2024-25ನೇ ಸಾಲಿನ 10ನೇ ತರಗತಿ ಪರೀಕ್ಷೆಗೆ 18 ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಜನವರಿ 27ರಂದು ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಎಸ್‌ಇ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕರಿಗೆ ಪಿಂಚಣಿ ಪರಿಷ್ಕರಿಸಿ ಪಾವತಿಸಲು ಸೂಚನೆ ನೀಡಿದ್ದ ಆದೇಶ ರದ್ದು