ಅಮೃತಸರ/ಚಂಡೀಗಢ: ಗಡೀಪಾರಾದ 116 ಭಾರತೀಯರ ಎರಡನೇ ತಂಡವನ್ನು ಅಮೆರಿಕದ ಮಿಲಿಟರಿ ವಿಮಾನವು ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ತಂದಿಳಿಸಿದೆ. ತಪಾಸಣೆಯ ಬಳಿಕ ಎಲ್ಲರನ್ನೂ ಪೊಲೀಸರು ವಾಹನಗಳಲ್ಲಿ ರವಾನಿಸಿದ್ದಾರೆ.
10 ಗಂಟೆಗೆ ಬರಬೇಕಿದ್ದ ಅಮೆರಿಕದ ಸಿ-17 ವಿಮಾನವು 11.35ರ ಸುಮಾರಿಗೆ ನಿಲ್ದಾಣದಲ್ಲಿ ಇಳಿಯಿತು. ಅಮೆರಿಕದ ವಿಮಾನದಲ್ಲಿ 119 ವಲಸಿಗ ಭಾರತೀಯರನ್ನು ಕರೆತರಲಾಗುತ್ತಿದೆ ಎಂದು ವರದಿಯಾಗಿತ್ತು. ಬಳಿಕ 116 ಜನರನ್ನು ಗಡೀಪಾರು ಮಾಡಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
#WATCH | Punjab | The second batch of illegal Indian immigrants who were deported from the US and brought to Amritsar today are now being sent to their respective states.
— ANI (@ANI) February 15, 2025
Visuals from outside of the Amritsar airport pic.twitter.com/T3MLtrmAVO
ಅಮೆರಿಕ ಗಡೀಪಾರು ಮಾಡುತ್ತಿರುವ ಅಕ್ರಮ ವಲಸಿಗ ಭಾರತೀಯರ ಎರಡನೇ ತಂಡ ಇದಾಗಿದೆ. ಈ ಮೊದಲು ಫೆಬ್ರವರಿ 5ರಂದು 104 ಜನರ ಗುಂಪನ್ನು ಇದೇ ವಿಮಾನ ನಿಲ್ದಾಣದಲ್ಲಿ ತಂದಿಳಿಸಲಾಗಿತ್ತು. ಎರಡೂ ತಂಡಗಳು ಸೇರಿ ಒಟ್ಟು 220 ಜನರನ್ನು ಗಡೀಪಾರು ಮಾಡಿದಂತಾಗಿದೆ.
ಪಂಜಾಬ್, ಹರಿಯಾಣದವರೇ ಹೆಚ್ಚು: ಗಡೀಪಾರಾದವರ ಪೈಕಿ ಪಂಜಾಬ್ನ 65 ಮಂದಿ, ಹರಿಯಾಣದ 33, ಗುಜರಾತ್‌ನ 8, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಇದ್ದಾರೆ. ಹೆಚ್ಚಿನವರು 18 ರಿಂದ 30 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.
ನಿಲ್ದಾಣಕ್ಕೆ ಸಚಿವರ ಭೇಟಿ: ಗಡೀಪಾರಾದ ಭಾರತೀಯರು ಕರೆತರಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪಂಜಾಬ್ ಸರ್ಕಾರದ ಸಚಿವರಾದ ಕುಲದೀಪ್ ಸಿಂಗ್ ಧಲಿವಾಲ್ ಮತ್ತು ಹರ್ಭಜನ್ ಸಿಂಗ್ ಅವರು ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಗಡೀಪಾರಾದ ಕೆಲವರನ್ನು ಭೇಟಿಯಾದರು. ರಾಜ್ಯ ಸರ್ಕಾರವು ಬೆಂಬಲಕ್ಕೆ ನಿಂತಿರುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದ್ದಾರೆ.
ಸಂಕೋಲೆ ಹಾಕಿದ್ದರೇ?: ಅಮೆರಿಕದಿಂದ ಗಡೀಪಾರಾದ ಮೊದಲ ತಂಡದಲ್ಲಿನ ವಲಸಿಗ ಭಾರತೀಯರಿಗೆ ಕೈಕೋಳ, ಸಂಕೋಲೆ ಹಾಕಿ ಬಂಧಿಸಿದ ಮಾದರಿಯಲ್ಲಿ ಕರೆತಂದು ಅನುಚಿತವಾಗಿ ನಡೆದುಕೊಳ್ಳಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಮೆರಿಕದ ಜೊತೆ ಮಾತುಕತೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಇದೀಗ, ಗಡೀಪಾರಾದ ಎರಡನೇ ತಂಡದಲ್ಲಿನ ಜನರಿಗೆ ಸಂಕೋಲೆ ಬಿಗಿದಿದ್ದರೆ, ಇಲ್ಲವೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.
ಇಂದು ಮೂರನೇ ತಂಡ ರವಾನೆ?: ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಭಾಗವಾಗಿ 157 ಅಕ್ರಮ ವಲಸಿಗ ಭಾರತೀಯರನ್ನು ಹೊತ್ತ ಅಮೆರಿಕದ ಮೂರನೇ ವಿಮಾನ ಇಂದು (ಫೆಬ್ರವರಿ 16) ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಡಿಪಾರಾದ ಭಾರತೀಯರಿಗೆ ಕೈಕೋಳ, ಸಂಕೋಲೆ ಬಿಗಿದ ಅಮೆರಿಕ : ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದೇನು?