ಪುಣೆ(ಮಹಾರಾಷ್ಟ್ರ): ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನಾಧರಿಸಿದ 'ಛಾವಾ' ಚಿತ್ರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಂದು ಶ್ಲಾಘಿಸಿದ್ದಾರೆ. ಇದೊಂದು ಐತಿಹಾಸಿಕ ಚಿತ್ರ. ಸತ್ಯ ಸಂಗತಿಗಳನ್ನು ತಿರುಚಲಾಗಿಲ್ಲ ಎಂದು ಹೇಳಿದ್ದಾರೆ.
ಮರಾಠಾ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಛಾವಾ ಚಿತ್ರವನ್ನು ಅವರು ಉಲ್ಲೇಖಿಸಿದರು.
"ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಜಗತ್ತಿನಾದ್ಯಂತ ಇರುವ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳಿಗೆ ಶುಭಾಶಯ ಕೋರುತ್ತೇನೆ. ಛತ್ರಪತಿ ಶಿವಾಜಿ ನಮಗೆ ಸ್ವಾಭಿಮಾನವನ್ನು ನೀಡಿದರು. ಸಮಾನತೆ ಮತ್ತು ಏಕತೆಯ ಪಾಠಗಳನ್ನು ನೀಡಿದರು. ಹೇಗೆ ಆಳಬೇಕು, ನೀರು ಮತ್ತು ಅರಣ್ಯ ಸಂರಕ್ಷಣೆಯನ್ನು ಹೇಗೆ ಮಾಡಬೇಕು, ತೆರಿಗೆ ರಚನೆ ಹೇಗಿರಬೇಕು ಮತ್ತು ಭದ್ರತೆ ಹೇಗಿರಬೇಕು ಎಂಬುದರ ಕುರಿತು ತಿಳಿಸಿದ್ದರು" ಎಂದು ಸ್ಮರಿಸಿದರು.
"ಮರಾಠಿಗೆ ಮೊದಲು ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದವರು ಛತ್ರಪತಿ ಶಿವಾಜಿ ಮಹಾರಾಜರು. ನಾವು ಅವರ ಸೈನಿಕರಂತೆ ಕೆಲಸ ಮಾಡುತ್ತಿದ್ದೇವೆ. ರಾಜ್ಯವನ್ನು ಆಳುತ್ತಿದ್ದೇವೆ" ಎಂದು ತಿಳಿಸಿದರು.
ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರ ನಿರ್ವಹಿಸಿದ ನಟ ವಿಕ್ಕಿ ಕೌಶಲ್ ಅವರನ್ನೂ ಸಹ ಫಡ್ನವಿಸ್ ಶ್ಲಾಘಿಸಿದರು.
ಇದನ್ನೂ ಓದಿ: ₹165 ಕೋಟಿ ಗಳಿಸಿದ 'ಛಾವಾ' : ರಶ್ಮಿಕಾ, ವಿಕ್ಕಿ ಸಿನಿಮಾದ ಜಾಗತಿಕ ಕಲೆಕ್ಷನ್ ಎಷ್ಟು?
"ಛತ್ರಪತಿ ಸಂಭಾಜಿ ಮಹಾರಾಜ್ ಅವರ ಶೌರ್ಯ, ಧೈರ್ಯ ಮತ್ತು ಜ್ಞಾನ ಅಪಾರವಾಗಿತ್ತು. ಅವರ ಬಗ್ಗೆ ಒಂದೊಳ್ಳೆ ಚಿತ್ರ (ಛಾವಾ) ನಿರ್ಮಿಸಲಾಗಿದೆ. ನಾನಿನ್ನೂ ಚಿತ್ರವನ್ನು ವೀಕ್ಷಿಸಿಲ್ಲ. ಆದ್ರೆ ಸಿನಿಮಾ ನೋಡಿದವರು ಈ ಚಿತ್ರವು ಸತ್ಯವನ್ನೇ ಹೇಳಿದೆ ಮತ್ತು ಐತಿಹಾಸಿಕ ಚಿತ್ರ ಎಂದು ಹೇಳಿದ್ದಾರೆ. ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಲ್ ಅವರನ್ನು ಅಭಿನಂದಿಸುತ್ತೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಡಿವೈನ್ ಸ್ಟಾರ್ : ಮರಾಠಾ ರಾಜನ ಶೌರ್ಯವನ್ನೊಳಗೊಂಡ ಸಿನಿಮಾಗಳಿವು
ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಕ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ 31 ಕೋಟಿ ರೂಪಾಯಿಯೊಂದಿಗೆ ತನ್ನ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ನಂತರ ಶನಿವಾರ 37 ಕೋಟಿ ರೂ., ಭಾನುವಾರ 48.5 ಕೋಟಿ ರೂ., ಸೋಮವಾರ 24 ಕೋಟಿ ರೂಪಾಯಿಯ ವ್ಯವಹಾರ ನಡೆಸಿದ ಸಿನಿಮಾ ಕಳೆದ ದಿನ 25.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಒಟ್ಟು ದೇಶೀಯ ಗಳಿಕೆ 165.75 ಕೋಟಿ ರೂಪಾಯಿ ಆಗಿದೆ. ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ.