ಜರುಸಲೇಂ(ಇಸ್ರೇಲ್): ತನ್ನಲ್ಲಿ ಒತ್ತೆಯಾಳಾಗಿರುವ ಕೊನೆಯ ಮಹಿಳೆ, ಮಕ್ಕಳು ಸೇರಿ ನಾಲ್ಕು ಶವಗಳನ್ನು ಹಮಾಸ್ ಉಗ್ರರು ಇಸ್ರೇಲ್ಗೆ ಗುರುವಾರ ಹಸ್ತಾಂತರಿಸಿದರು. ಈ ಮೂಲಕ 2023ರಲ್ಲಿ ನಡೆದ ದಾಳಿ ವೇಳೆ ಬಂಧಿತರಾಗಿರುವ 251 ಜನರ ಪೈಕಿ 28 ಮಂದಿಯನ್ನು ಬಿಡುಗಡೆ ಮಾಡಿದೆ.
ಕದನ ವಿರಾಮದ ಒಪ್ಪಂದದಂತೆ ಮೊದಲ ಹಂತದಲ್ಲಿ 33 ಜನರನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿದೆ. ಈ ಪೈಕಿ ಮಹಿಳೆಯರು, ಪುರುಷರು ಸೇರಿ 24 ಜನರನ್ನು ಬಿಡುಗಡೆ ಮಾಡಿತ್ತು. ಇಂದು ನಾಲ್ಕು ಶವಗಳನ್ನು ರವಾನಿಸಿದೆ. ಇದರಲ್ಲಿ ಓರ್ವ ಮಹಿಳೆ, ಇಬ್ಬರು ಮಕ್ಕಳು, ಒಬ್ಬ ವೃದ್ಧನ ಪಾರ್ಥಿವ ಶರೀರವಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ವೇಳೆ ಅಪಹರಣಕ್ಕೀಡಾದವರಲ್ಲಿ ಮಹಿಳೆ ಶಿರಿ ಬಿಬಾಸ್ ಮತ್ತು ಅವರ ಇಬ್ಬರು ಪುತ್ರರಾದ ಏರಿಯಲ್, ಕ್ಫೀರ್ ಇದ್ದರು. 450ಕ್ಕೂ ಅಧಿಕ ದಿನಗಳಿಂದ ಹಮಾಸ್ ಉಗ್ರರ ಸೆರೆಯಲ್ಲಿದ್ದ ವೇಳೆ ಮೂವರೂ ಸಾವಿಗೀಡಾಗಿದ್ದಾರೆ. ಇದರ ಜೊತೆಗೆ ವೃದ್ಧ ವ್ಯಕ್ತಿಯ ಶವವನ್ನೂ ಇಸ್ರೇಲ್ಗೆ ರವಾನಿಸಲಾಗಿದೆ.
ಕದನ ವಿರಾಮ ಒಪ್ಪಂದ: ಜನವರಿ 19ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದದಂತೆ ಮೊದಲ ಹಂತದಲ್ಲಿ, ಇಸ್ರೇಲ್ ಬಂಧಿಸಲ್ಪಟ್ಟ ಸುಮಾರು 2 ಸಾವಿರ ಪ್ಯಾಲೆಸ್ಟೈನಿಯನ್ ಕೈದಿಗಳಿಗೆ ಬದಲಾಗಿ ಗಾಜಾದಲ್ಲಿರುವ ಒಟ್ಟು 33 ಇಸ್ರೇಲ್ ನಾಗರಿಕರ ಬಿಡುಗಡೆಗೆ ಅಂಕಿತ ಹಾಕಲಾಗಿತ್ತು. ಇದರಲ್ಲಿ 8 ಮಂದಿ ಮೃತರು ಕೂಡ ಇದ್ದಾರೆ. ಈ ಪೈಕಿ ನಾಲ್ಕು ಶವಗಳನ್ನು ಇಂದು ಹಸ್ತಾಂತರಿಸಲಾಗಿದೆ.
ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್‌ನ ಸೇನೆಯ ಕಾರ್ಯಾಚರಣೆಯಲ್ಲಿ 48 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ ಎಷ್ಟು ಮಂದಿ ಹೋರಾಟಗಾರರು ಎಂದು ತಿಳಿಸಿಲ್ಲ. ಆದರೆ, ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಅಥವಾ ಮಕ್ಕಳು ಇದ್ದಾರೆ ಎಂದಿದೆ.
ಯಾರೆಲ್ಲಾ ಬಿಡುಗಡೆ?: ಹಮಾಸ್ ಬಳಿ ಒತ್ತೆಯಾಳಾಗಿದ್ದು ಬಿಡುಗಡೆಯಾದವರ ಪೈಕಿ ವೈದ್ಯ, ಕೃಷಿಕ, ಯೋಧರು, ಪತ್ರಕರ್ತ, ಸಾಮಾನ್ಯ ನಾಗರಿಕರು ಇದ್ದಾರೆ. ಈಗಾಗಲೇ ಮೂವರು ಮಹಿಳಾ ಯೋಧರನ್ನು ಹಮಾಸ್ ಇಸ್ರೇಲ್ಗೆ ಹಸ್ತಾಂತರಿಸಿದೆ. ಒತ್ತೆಯಾಳುಗಳ ಪೈಕಿ ಥೈಲ್ಯಾಂಡ್ನ 11 ಕಾರ್ಮಿಕರು ಕೂಡ ಇದ್ದಾರೆ. ಕತಾರ್, ಇಸ್ರೇಲ್‌ನ ಮಧ್ಯಸ್ಥಿಕೆಯಲ್ಲಿ ಹಮಾಸ್ ಐವರು ಥಾಯ್ ನಾಗರಿಕರು ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: ಮೃತ ಒತ್ತೆಯಾಳುಗಳ ಪಾರ್ಥಿವ ಶರೀರಗಳನ್ನ ಸ್ವೀಕರಿಸಲಿರುವ ಇಸ್ರೇಲ್: ನನ್ನ ಹೃದಯ ಚೂರಾಗಿದೆ ಎಂದ ನೆತನ್ಯಾಹು