ಉಡುಪಿ : ಶಿರ್ವ ಮೂಲದ ಯುವಕನೋರ್ವ ತನ್ನ ತಂದೆಯನ್ನು ಅವರ 25 ವರ್ಷಗಳ ಹಳೆಯ ಬೈಕ್ನಲ್ಲಿ ಪ್ರಯಾಗ್ರಾಜ್ಗೆ ಕರೆದುಕೊಂಡು ಹೋಗಿ ಪುಣ್ಯದರ್ಶನ ಮಾಡಿಸಿಕೊಂಡು ಬಂದಿದ್ದಾರೆ. ಕಾಪು ತಾಲೂಕಿನ ಕಟಪಾಡಿಯ ಶಿರ್ವ ಮೂಲದ ಪ್ರಜ್ವಲ್ ಶೆಣೈ (25) ಅವರು ತಮ್ಮ ತಂದೆ ರಾಜೇಂದ್ರ ಶೆಣೈ (52) ಅವರಿಗೆ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿಸಿಕೊಂಡು ಬಂದವರು.
ಫೆ.6 ರಂದು ಮುಂಜಾನೆ 4 ಗಂಟೆಗೆ ಶಿರ್ವದಿಂದ ಹೊರಟ ತಂದೆ ಮಗ ಯಲ್ಲಾಪುರ, ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ, ಸೋಲಾಪುರ, ಲಾತೂರು, ನಾಂದೇಡ್, ನಾಗಪುರ, ಜಬಲ್‌ಪುರ, ಮಾರ್ಗವಾಗಿ ಬೈಕಲ್ಲಿ 3 ಸಾವಿರ ಕಿ.ಮೀ. ಪ್ರಯಾಣ ಮಾಡಿ ಪ್ರಯಾಗ್‌ರಾಜ್ ತಲುಪಿದ್ದರು. ಫೆ.10 ರಂದು ತೀರ್ಥಸ್ನಾನ ಮಾಡಿ, ಫೆ.13ರಂದು ಶಿರ್ವಕ್ಕೆ ವಾಪಸಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರಯಾಣದ ನಡುವೆ ರಾತ್ರಿ ಮಾರ್ಗಮಧ್ಯೆ ಪೆಟ್ರೋಲ್ ಬಂಕ್ಗಳಲ್ಲಿ ಟೆಂಟ್ ಹಾಕಿ ರಾತ್ರಿ ಕಳೆದು ಬೆಳಗಿನ ಜಾವ ಮತ್ತೆ ಬೈಕ್ ಪ್ರಯಾಣ ಶುರು ಮಾಡುತ್ತಿದ್ದರು.
ಪ್ರಜ್ವಲ್ ಶೆಣೈ ಅನುಭವದ ಮಾತು : "ನಾವು ಪ್ರಯಾಗ್‌ರಾಜ್ ತಲುಪುವ ಮೊದಲೇ ಸುಮಾರು 250-300 ಕಿ.ಮೀ. ದೂರದಲ್ಲಿಯೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೂ ಬೈಕ್ ಸಂಚಾರಕ್ಕೆ ಮುಂದೆ ಸಾಗಲು ಅವಕಾಶವಿತ್ತು. ಸ್ನಾನಘಟ್ಟದಲ್ಲಿಯೂ ಯಾವುದೇ ನೂಕುನುಗ್ಗಲು ಇರಲಿಲ್ಲ. ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ದಾರಿಯಲ್ಲಿ ಕೂಡ ನಮ್ಮ ಬೈಕನ್ನು ನೋಡಿ ಜನರು ಕೂಡ ನಮ್ಮನ್ನು ನಿಲ್ಲಿಸಿ ಮಾತನಾಡಿಸಿ ಕಳುಹಿಸುತ್ತಿದ್ದರು. ಮಧ್ಯಪ್ರದೇಶದ ಸಿಯೋನಿಯಲ್ಲಿ ಹೋಗುವಾಗ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರದವರೊಬ್ಬರು ನಮ್ಮನ್ನು ನೋಡಿ ಬೈಕ್ ನಿಲ್ಲಿಸಿ, ತಮ್ಮಲ್ಲಿದ್ದ ಬೆಲೆಬಾಳುವ ತಂಪು ಕನ್ನಡಕ, ಸಿಹಿತಿಂಡಿ, ತಂಪು ಪಾನೀಯ ಮತ್ತು ಹಣ್ಣು, ಹಂಪಲುಗಳನ್ನು ನೀಡಿದ್ದರು. ಮತ್ತೆ ಅಲ್ಲಿನ ಪೊಲೀಸ್ ಕೂಡ ತುಂಬಾ ಸಹಕಾರ ಕೊಟ್ಟರು" ಎಂದು ತಮ್ಮ ಅನುಭವ ಹಂಚಿಕೊಂಡರು.
ಖರ್ದುಂಗ್ಲಾದಲ್ಲಿ ಕನ್ನಡದ ಬಾವುಟ ಹಾರಿಸಿದ್ದ ತಂದೆ-ಮಗ : 2024ರ ಜೂನ್ ತಿಂಗಳಲ್ಲಿ ಅಪ್ಪ-ಮಗನ ಜೋಡಿ ದುರ್ಗಮ ಹಾದಿಯಲ್ಲಿ ತಮ್ಮ ಬೈಕ್ ಮೂಲಕ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯಗಳನ್ನು ಸುತ್ತಿ ಲೇಹ್-ಲಡಾಕ್, ಕಾರ್ಗಿಲ್, ಮನಾಲಿ ಮೂಲಕ ಸಮುದ್ರ ಮಟ್ಟದಿಂದ ಸುಮಾರು 17,982 ಅಡಿ ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶ ಖರ್ದುಂಗ್ಲಾ ತಲುಪಿ ಕನ್ನಡ ಬಾವುಟ ಹಾರಿಸಿದ್ದರು.
'ಈಟಿವಿ ಭಾರತ' ಜೊತೆ ತಂದೆ ರಾಜೇಂದ್ರ ಶೆಣೈ ಮಾತನಾಡಿ, "ನಾಲ್ಕು ದಿನಗಳ ಕಾಲ ಈ ಬೈಕಿನಲ್ಲಿ ಕೇವಲ 20 ಸಾವಿರ ವೆಚ್ಚದಲ್ಲಿ 144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಮಗನ ಜೊತೆ ಪ್ರಯಾಣ ಮಾಡಿದ್ದು ನನಗೆ ಹೆಮ್ಮೆ ಅನಿಸುತ್ತಿದೆ. ಈ ಪ್ರಯಾಣವನ್ನು ಕಂಡ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಹೊಸ ಹೆಲ್ಮೆಟ್ ಗಿಫ್ಟ್ ಆಗಿ ನೀಡಿದ್ದಾರೆ" ಎಂದು ಹೇಳಿದರು.
"ನನ್ನ ಗಂಡ ಮತ್ತು ಮಗನಿಗೆ ಬಸ್ಸಿನಲ್ಲಿ ಹೋಗಿ ಅಭ್ಯಾಸ ಇಲ್ಲ, ಕಾರು ನಮ್ಮ ಹತ್ತಿರ ಇಲ್ಲ. ಅವರು ಬೈಕ್ನಲ್ಲಿ ಹೋಗಿ ಬರುತ್ತಾರೆ. ಅದರಲ್ಲೇ ನಾನು ಖುಷಿಪಡುತ್ತೇನೆ. ನಾನು ವ್ಯಾಪಾರ ಮಾಡಿಕೊಂಡು ಪಿಗ್ಮಿಯಲ್ಲಿ ಕೂಡಿಟ್ಟ ಹಣದಿಂದ ಅವರನ್ನು ಕಳುಹಿಸಿದ್ದೆ. ಮಗ ಗಂಡ ಕುಂಭಮೇಳಕ್ಕೆ ಹೋಗಿ ಬಂದಿದ್ದು ತುಂಬಾ ಖುಷಿಯಾಗುತ್ತಿದೆ. ಇದಕ್ಕಿಂತ ಇನ್ನೇನು ಬೇಕು" ಎನ್ನುತ್ತಾರೆ ಪ್ರಜ್ವಲ್ ತಾಯಿ ರಜನಿ.
ಇದನ್ನೂ ಓದಿ: ಮಹಾ ಕುಂಭಮೇಳ: 75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ