ಬೆಂಗಳೂರು: ಸಾಲ ವಸೂಲಿ ಸೋಗಿನಲ್ಲಿ ಅಮಾನವೀಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದ ಮೈಕ್ರೊ ಫೈನಾನ್ಸ್ ಕಂಪನಿಗಳು ಹಾಗೂ ಲೇವಾದೇವಿಗಾರರ ಆಟಾಟೋಪಕ್ಕೆ ಮೂಗುದಾರ ಹಾಕಿರುವ ರಾಜ್ಯ ಸರ್ಕಾರವು ಈ ಸಂಬಂಧ ಕ್ಷಿಪ್ರಗತಿಯಲ್ಲಿ ಸುಗ್ರೀವಾಜ್ಞೆ ತಂದು ತಕ್ಷಣದಿಂದಲೇ ಜಾರಿಯಾಗುವಂತೆ ಕರ್ನಾಟಕ ಕಿರುಸಾಲ ಹಾಗೂ ಸಣ್ಣಸಾಲ (ಬಲವಂತದ ವಿರುದ್ಧ ಪ್ರತಿಬಂಧಕ) 2025 ಕಾಯ್ದೆ ಜಾರಿ ತಂದಿದೆ.
ಕಾಯ್ದೆ ಜಾರಿಗೂ ಮುನ್ನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಹಣಕಾಸು ಸಂಸ್ಥೆಗಳು ನಡೆಸಿದ್ದ ದೌರ್ಜನ್ಯ ಹಾಗೂ ದಬ್ಬಾಳಿಕೆಗೆ ಜನರು ಹೈರಾಣಾಗಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಕಳೆದ ಜನವರಿ ನಾಲ್ವರು ಮೃತಪಟ್ಟಿದ್ದಾರೆ. 23 ಕಿರು ಹಣಕಾಸು ಸಂಸ್ಥೆಗಳ ವಿರುದ್ಧ ಹಾಗೂ 18 ಮಂದಿ ಖಾಸಗಿ ಲೇವಾದೇವಿಗಾರರ ವಿರುದ್ಧ ಎಫ್ಐಆರ್ ದಾಖಲಿಸಿ 23 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಮೈಕ್ರೋ ಫೆನಾನ್ಸ್ ಕಂಪನಿಗಳ ದೌರ್ಜನ್ಯಕ್ಕೆ ನಲುಗಿ ಕಳೆದ ತಿಂಗಳಲ್ಲಿ ಬೆಳಗಾವಿ ಹಾಗೂ ರಾಮನಗರದಲ್ಲಿ ಒಟ್ಟು ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ಬೈಲಹೊಂಗಲದಲ್ಲಿ ವಾಹನ ಖರೀದಿಗೆಂದು ರಫೀಕ್ ಬಾಬು ಸಾಬ್ ಎಂಬುವರು ಖಾಸಗಿ ವ್ಯಕ್ತಿಯಿಂದ 6 ಲಕ್ಷ ಸಾಲ ಪಡೆದಿದ್ದರು. ಸಾಲ ತೀರಿಸಿದ್ದರೂ ಮತ್ತೆ 6 ಲಕ್ಷ ನೀಡಬೇಕೆಂದು ಒತ್ತಾಯಿಸಿದ್ದರಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
"ಸಾಲ ವಸೂಲಿ ನೆಪದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಸಾಲ ಪಡದಿದ್ದವರ ಮನೆ ಬಳಿ ಹೋಗಿ ಕಿರುಕುಳ ನೀಡುತ್ತಿದ್ದ ಆರೋಪ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೈಕ್ರೋ ಫೈನಾನ್ಸ್ ಕಂಪನಿಗಳ ಏಜೆಂಟರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮಕಿ ಹಾಕಿರುವುದು ಗೊತ್ತಾಗಿದೆ. ಜನರಿಗೆ ಸಾಲ ನೀಡುವ ಮುನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಯದೇ ಸಾರಾಸಗಟಾಗಿ ಲೋನ್ ನೀಡಿ, ಅತ್ಯಧಿಕ ಬಡ್ಡಿ ವಿಧಿಸಿದ್ದಾರೆ. ಈ ಮೂಲಕ ಆರ್ ಬಿಐ ಗೈಡ್ ಲೆನ್ಸ್ ಉಲ್ಲಂಘಿಸಿರುವುದು ಕಂಡು ಬಂದಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
''ದೌರ್ಜನ್ಯವೆಸಗಿದ್ದ ಖಾಸಗಿ ಲೇವಾದೇವಿಗಾರರು ಹಾಗೂ ಮೈಕ್ರೊ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಹಾಗೂ ಇನ್ನಿತರರು ಒಳಗೊಂಡಂತೆ ಕಳೆದ 15 ದಿನಗಳಲ್ಲಿ 50 ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಕನ್ನಡದ ಕಾರವಾರದಲ್ಲಿ 30 ಮಂದಿಯನ್ನು ಬಂಧಿಸಿದರೆ ಇನ್ನುಳಿದವರನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರೆಸ್ಟ್ ಮಾಡಲಾಗಿದೆ. ಲೇವಾದೇವಿ ನಡೆಸಲು ಕೆಲ ಬಂಧಿತರು ಸರ್ಕಾರಿಂದ ಪರವಾನಗಿ ಪಡೆದುಕೊಂಡಿಲ್ಲ. ಸಾಲ ವಸೂಲಿ ಸೋಗಿನಲ್ಲಿ ಇನ್ನೂ ಕೆಲವರು ಸುಲಿಗೆ ಹಾಗೂ ಬೆದರಿಕೆವೊಡ್ಡುತ್ತಿದ್ದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಲೇವಾದೇವಿದಾರರ ಅಧಿನಿಯಮ - 1961ರ ಅಧಿನಿಯಮದಡಿ 2024ರ ಡಿಸೆಂಬರ್ 31ರವರೆಗೆ ರಾಜ್ಯದಲ್ಲಿ 20,425 ಸಂಸ್ಥೆಗಳು ನೋಂದಣಿಯಾಗಿವೆ. ಅದರಲ್ಲಿ 6,590 ಲೇವಾದೇವಿದಾರರು, 6,772 ಪಾನ್ ಬ್ರೋಕರ್‌ಗಳು, 7,063 ಹಣಕಾಸಿನ ಸಂಸ್ಥೆಗಳು (Finance Corporation)ಇವೆ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮಾಹಿತಿ ನೀಡಿದ್ದರು.
ಕಿರು ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರ ವಿರುದ್ಧ ಮೂರು ವರ್ಷದಲ್ಲಿ ದಾಖಲಾದ ಪ್ರಕರಣಗಳು:
ವರ್ಷ | ಕಿರು ಫೈನಾನ್ಸ್ ಕಂಪೆನಿಗಳು | ಲೇವಾದೇವಿಗಾರರು | ಸಾವನ್ನಪ್ಪಿದವರು | ಬಂಧಿತರಾದವರು |
---|---|---|---|---|
2023 | 6 | 10 | 5 | 16 |
2024 | 14 | 19 | 4 | 33 |
2025 (ಜ.31 ಅಂತ್ಯಕ್ಕೆ) | 23 | 18 | 4 | 23 |
ಒಟ್ಟು | 43 | 47 | 13 | 72 |
ಇದನ್ನೂ ಓದಿ: ನೋಂದಣಿಯಾಗದ ಅಕ್ರಮ ಫೈನಾನ್ಸ್ ಕಂಪನಿಗಳು ತಕ್ಷಣ ಬಂದ್ ಆಗಬೇಕು : ಸಿಎಂ ಸೂಚನೆ