ಹುಬ್ಬಳ್ಳಿ: ನಗರದ ಮಯೂರಿ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸಕ್ಕೆ ಇಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಭೇಟಿಯ ಕುರಿತು ಜನಾರ್ದನ ರೆಡ್ಡಿ ಮಾತನಾಡಿ, "ಮಾರ್ಚ್ನಲ್ಲಿ ನನ್ನ ಮೊಮ್ಮಗನ ನಾಮಕರಣವಿದೆ. ಹೀಗಾಗಿ ಜೋಶಿ ಅವರಿಗೆ ಆಹ್ವಾನಿಸಲು ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆಯಾಗಿಲ್ಲ. ಏನೇ ಬೆಳವಣಿಗೆ ಇದ್ದರೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ" ಎಂದರು.
ಈ ಸಂದರ್ಭದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರೂ ಜೊತೆಗಿದ್ದರು. "ನಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರಲ್ಹಾದ್ ಜೋಶಿ ನಮ್ಮ ಹಿರಿಯ ನಾಯಕರು. ಕೇಂದ್ರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಮದುವೆಗೆಂದು ಹುಬ್ಬಳ್ಳಿಗೆ ಬಂದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಅವರ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದೇನೆ. ಪಕ್ಷದ ಆಂತರಿಕ ವಿಚಾರ ಸೇರಿದಂತೆ ಇತರೆ ವಿಷಯಗಳು ಚರ್ಚೆಯಾಗಿಲ್ಲ. ಇದೊಂದು ಸಹಜ ಭೇಟಿ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಹಿರಿಯ ನಾಯಕರು ಚರ್ಚೆ ಮಾಡುತ್ತಾರೆ" ಎಂದು ತೇಲ್ಕಾರ್ ಹೇಳಿದರು.
ಇದನ್ನೂ ಓದಿ: ಶುಭ ಶುಕ್ರವಾರ ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಶಾಸಕ ಯತ್ನಾಳ್