ಲಖನೌ, ಉತ್ತರಪ್ರದೇಶ: ಮಹಾಕುಂಭ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದುವರೆಗೂ 50ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ. ಮತ್ತೊಂದು ಕಡೆ ದೇಶ-ವಿದೇಶಗಳಿಂದ ಬರುವ ಯಾತ್ರಾರ್ಥಿಗಳಿಂದ ವ್ಯಾಪಾರ ಹೆಚ್ಚುತ್ತಿದೆ. ಪ್ರಯಾಗರಾಜ್ ಗೆ ಭೇಟಿ ನೀಡುತ್ತಿರುವ ಯಾತ್ರಿಕರ ವೆಚ್ಚದಿಂದಾಗಿ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯುಪಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಮಹಾಶಿವರಾತ್ರಿವರೆಗೆ ಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆ 60 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.
ಯುಪಿ ಸರ್ಕಾರವು ಮಹಾಕುಂಭ ಮೇಳವನ್ನು ಅತ್ಯಂತ ವೈಭವದಿಂದ ಆಯೋಜಿಸುತ್ತಿದೆ. ಶಿವರಾತ್ರಿ ಆಚರಿಸಲು ಯಾತ್ರಾರ್ಥಿಗಳ ನೂಕುನುಗ್ಗಲು ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಲಾಗಿದೆ. 2030 ರ ವೇಳೆಗೆ ಆಧ್ಯಾತ್ಮಿಕ ಪ್ರವಾಸೋದ್ಯಮವು ದೇಶದ 10 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಇದೇ ವೇಳೆ ಅನೇಕ ವರದಿಗಳು ಹೇಳುತ್ತಿವೆ.
ಉತ್ತರಪ್ರದೇಶಕ್ಕೆ 3 ಲಕ್ಷ ಕೋಟಿ ರೂ. ಆದಾಯ: ಪ್ರಯಾಗರಾಜ್‌ನಲ್ಲಿ ಭಕ್ತರಿಗಾಗಿ 3,000 ಅಡುಗೆ ಮನೆಗಳು, 1,50,000 ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. 40 ಕಿಲೋಮೀಟರ್‌ಗಳವರೆಗೆ ಡೇರೆ ನಗರ ನಿರ್ಮಾಣ ಮಾಡಿ 25 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಕ್ತರ ಅನುಕೂಲಕ್ಕಾಗಿ ಕಟ್ಟಡಗಳು, ರಸ್ತೆಗಳು, ವಿದ್ಯುತ್, ನೀರು, ಸೆಲ್ ಟವರ್‌ಗಳು ಮತ್ತು 11 ಆಸ್ಪತ್ರೆಗಳು ಲಭ್ಯವಾಗುವಂತೆ ಮಾಡಲಾಗಿದೆ. ನದಿಯ ಮರಳಿನ ದಿಬ್ಬಗಳಲ್ಲಿ ಭವ್ಯವಾದ ಗೋಪುರಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಉಳಿಯಲು ಒಬ್ಬರು 1000 ಡಾಲರ್ ಪಾವತಿಸಬೇಕಿದೆ. ನದಿಯಲ್ಲಿ ದೋಣಿ ವಿಹಾರ, ಹೋಟೆಲ್‌ಗಳು, ಸಣ್ಣ ವ್ಯಾಪಾರಸ್ಥರಿಗೆ ಎಲ್ಲ ಅನುಕೂಲ ಮಾಡಿಕೊಡಲಾಗಿದ್ದು, ಅಲ್ಲಿ ಎಲ್ಲ ಕಡೆ ಭಕ್ತರ ದಂಡೇ ಇದೆ.
ಈ ಎಲ್ಲ ವಿಭಾಗಗಳಲ್ಲಿ ತಾತ್ಕಾಲಿಕ ಉದ್ಯೋಗ ಸೃಷ್ಟಿ: ಆಟೋಗಳು, ಬಸ್‌ಗಳು, ರಿಕ್ಷಾಗಳು ಮತ್ತು ಖಾಸಗಿ ವಾಹನಗಳಿಗಾಗಿ ಯಾತ್ರಾರ್ಥಿಗಳು ಅಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಹೀಗಾಗಿ ವಾಹನಗಳ ಮಾಲೀಕರು ಅಪಾರ ಹಣವನ್ನು ಗಳಿಸುತ್ತಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ 45 ದಿನಗಳವರೆಗೆ ಲಕ್ಷಾಂತರ ಜನರು ನೇರ ಮತ್ತು ಪರೋಕ್ಷ ತಾತ್ಕಾಲಿಕ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಮಹಾಕುಂಭ ಮೇಳದಿಂದಾಗಿ ವಾಣಿಜ್ಯ ಜಾಹೀರಾತುಗಳು ಮತ್ತು ಹೋರ್ಡಿಂಗ್‌ಗಳು ಸರ್ಕಾರಕ್ಕೆ ಆದಾಯವನ್ನು ತಂದುಕೊಡುತ್ತಿವೆ. ಇದಲ್ಲದೇ ಕುಂಭಮೇಳಕ್ಕೆ ಬರುವ ಯಾತ್ರಾರ್ಥಿಗಳು ಮಾಡುವ ಖರ್ಚಿನಿಂದಾಗಿ ಉತ್ತರ ಪ್ರದೇಶದ ಆರ್ಥಿಕತೆ ಬಲಗೊಳ್ಳುತ್ತಿದೆ. ಉತ್ತರಪ್ರದೇಶ ಸರ್ಕಾರಕ್ಕೆ ಸುಮಾರು ರೂ.3 ಲಕ್ಷ ಕೋಟಿಗಳಷ್ಟು ಆದಾಯ ಹರಿದು ಬಂದಿದೆ ಎಂದು ಘೋಷಿಸಿದೆ. ಈ ರೀತಿಯ ಧಾರ್ಮಿಕ ಆಚರಣೆಗಳು ಪ್ರತಿ ವರ್ಷ ದೇಶದ ಆರ್ಥಿಕತೆಗೆ ಪರೋಕ್ಷವಾಗಿ ನೆರವಾಗುತ್ತವೆ ಎನ್ನುತ್ತಾರೆ ಆರ್ಥಿಕ ತಜ್ಞರು.
10 ಕೋಟಿ ಜನರಿಗೆ ಉದ್ಯೋಗ: ಪ್ರಯಾಗ್‌ರಾಜ್‌ನಲ್ಲಿ ಸುಮಾರು 8 ನೇ ಶತಮಾನದಿಂದಲೂ ಮಹಾಕುಂಭ ಮೇಳ ನಡೆದುಕೊಂಡು ಬರುತ್ತಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪ ತೊಲಗುತ್ತದೆ ಎಂಬ ನಂಬಿಕೆಯಿಂದ ದೇಶ ವಿದೇಶಗಳಿಂದ ಕುಂಭಮೇಳಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಗರಾಜ್ ಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಹಿಂದಿನ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಕ್ತರು ಸುರಕ್ಷಿತವಾಗಿ ಪವಿತ್ರ ಸ್ನಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ವರದಿಗಳ ಪ್ರಕಾರ, ಆಧ್ಯಾತ್ಮಿಕ ಪ್ರವಾಸೋದ್ಯಮವು 2030 ರ ವೇಳೆಗೆ ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡುತ್ತದೆ. ಆಧ್ಯಾತ್ಮಿಕ ಪ್ರವಾಸೋದ್ಯಮವು ದೇಶೀಯ ಪ್ರವಾಸೋದ್ಯಮದ 60 ಪ್ರತಿಶತವನ್ನು ಹೊಂದಿದೆ.