How to Make Idli with Dosa Batter : ದೋಸೆ ಹಿಟ್ಟು ಹೆಚ್ಚಿನ ಜನರ ಮನೆಗಳಲ್ಲಿ ಖಂಡಿತವಾಗಿಯೂ ಇದ್ದೇ ಇರುತ್ತದೆ. ಕೆಲವರು ಮೂರು ಅಥವಾ ನಾಲ್ಕು ದಿನಗಳವರೆಗೆ ಸಾಕಷ್ಟು ಪ್ರಮಾಣದಲ್ಲಿ ಒಂದೇ ಬಾರಿಗೆ ದೋಸೆ ಹಿಟ್ಟನ್ನು ತಯಾರಿಸಿ ಇಡುತ್ತಾರೆ. ಉಪಹಾರ ಸಮಯದಲ್ಲಿ ದಿನಕ್ಕೆ ಬೇಕಾದಷ್ಟು ಹಿಟ್ಟು ತೆಗೆದುಕೊಂಡು ಉಳಿದದ್ದನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿ ಇಡುತ್ತಾರೆ.
ಈ ಹಿಟ್ಟಿನಿಂದ ಅವರು ಸಾದಾ, ಮಸಾಲಾ, ಮೊಟ್ಟೆ ಮತ್ತು ಮೆಣಸಿನಕಾಯಿ ದೋಸೆ ಸೇರಿದಂತೆ ವಿವಿಧ ರೀತಿಯ ದೋಸೆಗಳನ್ನು ತಯಾರಿಸಿ ಸೇವಿಸುತ್ತಾರೆ. ನಿತ್ಯ ದೋಸೆಗಳನ್ನೇ ಸೇವಿಸಿದರೆ ಬೇಸರ ತರಿಸುತ್ತದೆ. ಈ ದೋಸೆ ಹಿಟ್ಟನ್ನು ಹೊರಗೆ ಎಸೆಯಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ನೀವು ದೋಸೆ ಹಿಟ್ಟಿನೊಂದಿಗೆ ಸೂಪರ್ ಮೃದುವಾದ ಇಡ್ಲಿಗಳನ್ನು ಮಾಡಬಹುದು. ಇದರಿಂದ ಮಾಡುವಂತಹ ಇಡ್ಲಿಗಳು ತುಂಬಾ ರುಚಿಯಾಗಿ ಇರುತ್ತವೆ. ತಡಮಾಡದೆ ಮೃದುವಾದ ಇಡ್ಲಿಗಳನ್ನು ಹೇಗೆ ತಯಾರಿಸಬೇಕು ಎಂದು ತಿಳಿಯೋಣ.
ನೀವು ಇಡ್ಲಿಗಳನ್ನು ಸಿದ್ಧಪಡಿಸಲು ಬಯಸಿದರೆ ಮೊದಲು ದೋಸೆ ಹಿಟ್ಟನ್ನು ತಯಾರಿಸಬೇಕು. ಈ ಹಿಟ್ಟಿನಿಂದ ದೋಸೆ ಹಾಗೂ ಇಡ್ಲಿ ಎರಡೂ ಸೂಪರ್ ರುಚಿಕರವಾಗಿರುತ್ತವೆ. ಈಗಾಗಲೇ ನಿಮ್ಮ ಬಳಿಯಲ್ಲಿ ದೋಸೆ ಹಿಟ್ಟು ಇದ್ದರೆ, ಇಡ್ಲಿ ಮಾಡುವ ವಿಧಾನ ಮತ್ತು ದೋಸೆ ಹಿಟ್ಟು ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.
ಅಗತ್ಯವಿರುವ ಸಾಮಗ್ರಿಗಳೇನು ?
- ಉದ್ದಿನ ಬೇಳೆ - 1 ಕಪ್
- ಮೆಂತ್ಯ - 1 ಟೀಸ್ಪೂನ್
- ಪಡಿತರ ಅಕ್ಕಿ - 3 ಕಪ್
- ಅವಲಕ್ಕಿ - ಅರ್ಧ ಕಪ್
ತಯಾರಿಸುವ ವಿಧಾನ ಹೇಗೆ ?
- ಒಂದು ಬಟ್ಟಲಿನಲ್ಲಿ ಉದ್ದಿನಬೇಳೆ ಮತ್ತು ಮೆಂತ್ಯ ಕಾಳನ್ನು ತೆಗೆದುಕೊಂಡು ಎರಡು ಅಥವಾ ಚೆನ್ನಾಗಿ ತೊಳೆಯಿರಿ.
- ಬಳಿಕ ಸಾಕಷ್ಟು ನೀರು ಸುರಿದು ಸುಮಾರು ಐದು ಗಂಟೆಗಳ ಕಾಲ ನೆನೆಸಿ ಇಡಬೇಕಾಗುತ್ತದೆ. ಇನ್ನೊಂದು ಪಾತ್ರೆಯಲ್ಲಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಐದು ಗಂಟೆವರೆಗೆ ನೆನೆಸಿ ಇಡಬೇಕು.
- ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ಚೆನ್ನಾಗಿ ನೆನೆಸಿದ ಬಳಿಕ ಮತ್ತೊಮ್ಮೆ ಸ್ವಚ್ಛವಾಗಿ ತೊಳೆಯಿರಿ. ಹಿಟ್ಟು ರುಬ್ಬುವ ಐದು ನಿಮಿಷಗಳ ಮೊದಲು ಅವಲಕ್ಕಿ ಮತ್ತು ಸ್ವಲ್ಪ ನೀರನ್ನು ಒಂದು ಬಟ್ಟಲಿಗೆ ಸುರಿಯಿರಿ, ಅವುಗಳನ್ನು ನೆನೆಯಲು ಬಿಡಬೇಕು.
- ಈಗ ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ಅವಲಕ್ಕಿ, ಮೆಂತ್ಯ ಬೀಜವನ್ನು ಸೇರಿಸಿ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುವ ಮೂಲಕ ಸಾಧ್ಯವಾದಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕಾಗುತ್ತದೆ. ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಇದೀಗ ಅದೇ ಮಿಕ್ಸರ್ ಜಾರ್‌ಗೆ ನೆನೆಸಿದ ಉದ್ದಿನ ಮತ್ತು ಅಕ್ಕಿಯನ್ನು ಸೇರಿಸಿ ಮತ್ತು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನುಣ್ಣಗೆ ರುಬ್ಬಿಕೊಳ್ಳಿ. ಅವಲಕ್ಕಿ, ಮೆಂತ್ಯ ಕಾಳನ್ನು ಹಿಟ್ಟು ಇರುವ ಬಟ್ಟಲಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ಎಲ್ಲಾ ಅಕ್ಕಿಯನ್ನು ಈ ರೀತಿ ರುಬ್ಬಿಕೊಳ್ಳಿ. ಹೀಗೆ ಮಾಡಿದರೆ ದೋಸೆ ಹಿಟ್ಟು ಸಿದ್ಧವಾಗುತ್ತದೆ.
- ಇದೀಗ ಈ ದೋಸೆ ಹಿಟ್ಟಿಗೆ ಅರ್ಧ ಕಪ್ ಗೋಧಿ ರವಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಂಟೆ ಪಕ್ಕಕ್ಕೆ ಇರಿಸಿ. ನೀವು ಮೊದಲೇ ತಯಾರಿಸಿದ ದೋಸೆ ಹಿಟ್ಟನ್ನು ಹೊಂದಿದ್ದರೂ ಸಹ ನೀವು ಅದಕ್ಕೆ ಗೋಧಿ ರವೆಯನ್ನು ಸೇರಿಸಬಹುದು. ಉಪ್ಪು ಈಗಾಗಲೇ ಸೇರಿಸಿರುವುದರಿಂದ ಅಗತ್ಯವಿಲ್ಲ.
- ಒಂದು ಗಂಟೆಯ ನಂತರ ಒಲೆ ಆನ್ ಮಾಡಿ. ಇಡ್ಲಿ ಪಾತ್ರೆಯನ್ನು ಅದರ ಮೇಲೆ ಇರಿಸಿ. ಅದರಲ್ಲಿ ಸಾಕಷ್ಟು ನೀರು ಸುರಿಯಿರಿ ಹಾಗೂ ಅದನ್ನು ಕುದಿಸಿಬೇಕು.
- ಈ ಮಧ್ಯೆ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ, ಅದರೊಳಗೆ ಹಿಟ್ಟನ್ನು ಎಲ್ಲಾ ತಟ್ಟೆಗಳಲ್ಲಿ ಹಾಕಿ.
- ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯುತ್ತಿರುವಾಗ, ಇಡ್ಲಿ ತಟ್ಟೆಗಳನ್ನು ಅದರಲ್ಲಿ ಇರಿಸಿ ಮುಚ್ಚಿಡಿ.
- ಬಳಿಕ ಉರಿಯನ್ನು ಮಧ್ಯಮಕ್ಕೆ ಇಳಿಸಿ ಹಾಗೂ ಒಲೆ ಆಫ್ ಮಾಡುವ ಮೊದಲು 10 ರಿಂದ 12 ನಿಮಿಷ ಬೇಯಿಸಬೇಕಾಗುತ್ತದೆ. ಇದೀಗ ರುಚಿಕರವಾದ ಸೂಪರ್ ಸಾಫ್ಟ್ ಇಡ್ಲಿಗಳು ಸವಿಯಲು ಸಿದ್ಧವಾಗಿದೆ.
- ಐದು ನಿಮಿಷಗಳ ನಂತರ ಅದನ್ನು ಒಂದು ತಟ್ಟೆಯಲ್ಲಿ ಬಡಿಸಿ. ಶೇಂಗಾ ಚಟ್ನಿ ಮತ್ತು ಸಾಂಬಾರ್ ಜೊತೆಗೆ ಸೇವಿಸಬಹುದು. ನಿಮಗೆ ಈ ರೆಸಿಪಿ ಇಷ್ಟವಾದರೆ ಟ್ರೈ ಮಾಡಿ, ಮನೆ ಮಂದಿ ಇಷ್ಟಪಟ್ಟು ತಿನ್ನುತ್ತಾರೆ.