ಬೆಂಗಳೂರು: ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಂದು ಹಾಕಿದ ಘಟನೆ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಶಿರಾದ ಕಿಶೋರ್ ಕುಮಾರ್ (34) ಕೊಲೆಯಾದವ. ಕೃತ್ಯ ಎಸಗಿದ ಆರೋಪಿ ಸತೀಶ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪತ್ನಿಯೊಂದಿಗೆ ಕಿಶೋರ್ ಕುಮಾರ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡಿದ್ದ ಸತೀಶ್ ರೆಡ್ಡಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪೂರ್ಣ ವಿವರ: "ಕೆಜಿಎಫ್‌ನ ಸತೀಶ್ ರೆಡ್ಡಿ ಹೆಬ್ಬಗೋಡಿಯ ಯುವತಿಯನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಾರತ್ತಹಳ್ಳಿಯಲ್ಲಿ ಇವರ ವಾಸ. ಸತೀಶ್ ರೆಡ್ಡಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದಾರೆ. ಈ ಮಧ್ಯೆೆ ಶಿರಾದ ಕಿಶೋರ್ ಕುಮಾರ್ ಕೆಲ ವರ್ಷಗಳಿಂದ ನಗರದಲ್ಲೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಕ್ಯಾಬ್‌ನಲ್ಲಿಯೇ ಮಲಗುತ್ತಿದ್ದ. ಕಿಶೋರ್ ಹಾಗೂ ಸತೀಶ್ ಕೆಲ ವರ್ಷಗಳಿಂದ ಸ್ನೇಹಿತರು. ಹೀಗಿರುವಾಗ ಆರು ತಿಂಗಳಿಂದ ಕೌಟುಂಬಿಕ ವಿಚಾರಕ್ಕೆ ಸತೀಶ್ ರೆಡ್ಡಿ ಪತ್ನಿ ಮತ್ತು ಮಕ್ಕಳಿಂದ ದೂರವಾಗಿದ್ದ. ಈ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಆತನ ಪತ್ನಿ ಮನೆ ಬಾಡಿಗೆ ಕಟ್ಟಿರಲಿಲ್ಲ. ಅಲ್ಲದೇ ಕಿಶೋರ್ ಆಗಾಗ್ಗೆೆ ಪತ್ನಿ ಮನೆಗೆ ಬಂದು ಹೋಗುತ್ತಿದ್ದ ಎಂದು ಹೇಳಲಾಗಿದೆ. ಈ ವಿಚಾರ ಗೊತ್ತಾದ ಬಳಿಕ ಸತೀಶ್, ಕಿಶೋರ್ ಮತ್ತು ಪತ್ನಿಗೆ ಬುದ್ಧಿವಾದ ಹೇಳಿ ಅಂತರ ಕಾಯ್ದುಕೊಂಡು, ಮಾತನಾಡುವುದನ್ನೇ ಬಿಟ್ಟಿದ್ದ. ಶುಕ್ರವಾರ ಸಂಜೆ ಪತ್ನಿ ಮನೆಯ ಸಮೀಪದ ನಿರ್ಮಾಣ ಹಂತದ ಕಟ್ಟಡದ ಬಳಿ ಕಿಶೋರ್ ಇರುವುದನ್ನು ಸತೀಶ್ ನೋಡಿದ್ದಾನೆ. ಇದರಿಂದ ಕೋಪಗೊಂಡ ಸತೀಶ್, ಕಿಶೋರ್ ಜೊತೆ ಜಗಳ ತೆಗೆದು, ನಡು ರಸ್ತೆಯಲ್ಲಿ ಇಬ್ಬರೂ ಮಾರಾಮಾರಿ ನಡೆಸಿದ್ದಾರೆ. ಇದು ವಿಕೋಪಕ್ಕೆೆ ತಿರುಗಿದೆ. ಕೋಪದಲ್ಲಿದ್ದ ಸತೀಶ್ ಚಾಕುವಿನಿಂದ ಕಿಶೋರ್ ಎದೆ ಹಾಗೂ ದೇಹದ ಇತರ ಭಾಗಗಳಿಗೆ ಇರಿದು ಹತ್ಯೆೆಗೈದಿದ್ದಾನೆ. ಈ ಘಟನೆ ಕಂಡ ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ತೆರಳಿ ನೋಡುವಷ್ಟರಲ್ಲಿ ಕಿಶೋರ್ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಆರೋಪಿ ಸತೀಶ್‌ನನ್ನು ವಶಕ್ಕೆೆ ಪಡೆದಿದ್ದೇವೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಸೇರಿ ಮೂವರು ಸೆರೆ