ಪ್ರಯಾಗ್‌ರಾಜ್(ಉತ್ತರ ಪ್ರದೇಶ): "ಕೆಲವು ರಾಜಕೀಯ ಪಕ್ಷಗಳು ಭಾಷೆಯ ಆಧಾರದಲ್ಲಿ ಇನ್ನೂ ದೇಶವನ್ನು ಇಬ್ಭಾಗಿಸಲು ಬಯಸುತ್ತಿವೆ" ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ. "ಮಾತೃಭಾಷೆ ಎಲ್ಲರಿಗೂ ಮುಖ್ಯ. 10 ಭಾಷೆಗಳನ್ನು ತಿಳಿದುಕೊಂಡ ಬಳಿಕವೇ ತಮಿಳಿನ ಮಹಾಕವಿ ಭಾರತಿ ಅವರು ತಮಿಳನ್ನು ಶ್ರೇಷ್ಠ ಭಾಷೆ ಎಂದು ಕರೆದರು. ಹಾಗಾಗಿ, ಜನರು ಹೆಚ್ಚು ಭಾಷೆಗಳನ್ನು ಕಲಿಯಬೇಕು" ಎಂದರು.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿಚಾರವಾಗಿ ಕೆಲವು ರಾಜಕೀಯ ಪಕ್ಷಗಳು ಅನಪೇಕ್ಷಿತ ವಿವಾದ ಎಬ್ಬಿಸುತ್ತಿವೆ. ಇದರೊಂದಿಗೆ ದೇಶವನ್ನು ಭಾಷೆಯ ಆಧಾರದಲ್ಲಿ ಇಬ್ಭಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆಡಳಿತಾರೂಢ ಡಿಎಂಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಹಿಂದಿ ಭಾಷೆಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಹೇರುವ ಕೆಲಸ ಮಾಡುತ್ತಿದೆ ಎಂದು ಡಿಎಂಕೆ ಆರೋಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಪ್ರಯಾಗ್‌ರಾಜ್‌ನಲ್ಲಿ ಶನಿವಾರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೆಲವು ದಿನಗಳ ಹಿಂದೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತಮಿಳುನಾಡಿನಲ್ಲಿ ತ್ರಿಭಾಷಾ ನೀತಿಯನ್ನು ಅನುಷ್ಠಾನಗೊಳಿಸದಿದ್ದರೆ ಸಮಗ್ರ ಶಿಕ್ಷಾ ನಿಧಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಅಣ್ಣಾಮಲೈ, "ಇಂಥದ್ದೇ ಭಾಷೆಯನ್ನು ವಿದ್ಯಾರ್ಥಿಗಳು ಕಲಿಯಬೇಕೆಂದು ಯಾರೂ ಬಲವಂತ ಮಾಡುವುದಿಲ್ಲ. ಇದರ ಬದಲು ಅವರು ತಮಗಿಷ್ಟದ ಯಾವುದೇ ಒಂದು ಭಾಷೆಯನ್ನು ಆಯ್ದುಕೊಂಡು ಕಲಿಕೆ ಮುಂದುವರೆಸಬಹುದು" ಎಂದರು.
"ಭಾರತದ ಒಂದು ಭಾಷೆಯನ್ನು ಕಲಿಯುವುದಕ್ಕೆ ಎನ್‌ಇಪಿ ಮಹತ್ವ ನೀಡುತ್ತದೆ. ಇದು ಯಾವುದೇ ಭಾಷೆ ಆಗಿರಬಹುದು. ತಮಿಳುನಾಡಿನಲ್ಲಿ ವಿದ್ಯಾರ್ಥಿಗಳು ಯಾವುದೇ ದ್ರಾವಿಡ ಭಾಷೆಯನ್ನೂ ಇದರೊಂದಿಗೆ ಕಲಿಯಲು ಸಾಧ್ಯವಿದೆ. ಈ ಕುರಿತಾಗಿ ರಾಜಕೀಯ ಪಕ್ಷಗಳು ಅನಪೇಕ್ಷಿತ ವಿವಾದ ಹುಟ್ಟು ಹಾಕುತ್ತಿವೆ" ಎಂದು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ: "ಯಾವುದೇ ರಾಜ್ಯದ ವಿದ್ಯಾರ್ಥಿಗಳ ಮೇಲೆ ಯಾವುದೇ ಭಾಷೆಯನ್ನು ಹೇರಲು ಬರುವುದಿಲ್ಲ. ಎನ್‌ಇಪಿ ಹಿಂದಿಯನ್ನು ತಮಿಳುನಾಡಿನಲ್ಲಿ ಶಿಫಾರಸು ಮಾಡುವುದಿಲ್ಲ" ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ಹೇಳಿದ್ದಾರೆ.
"ಭಾರತ ಮೂಲವನ್ನು ಹೊಂದಿ, ನಮ್ಮ ಶಿಕ್ಷಣಕ್ಕೆ ಜಾಗತಿಕ ಮಟ್ಟದ ಗುಣಮಟ್ಟವನ್ನು ತಂದುಕೊಡುವುದೇ ಎನ್‌ಇಪಿ-2020 ಮೂಲ ಸಾರ. ಇದು ತಮಿಳುನಾಡಿನಂಥ ರಾಜ್ಯಗಳ ಭಾಷಾ, ಸಾಂಸ್ಕೃತಿಕ ಪರಂಪರೆಯನ್ನೂ ಬೆಂಬಲಿಸಲೇಬೇಕು. ಕೇಂದ್ರ ಸರ್ಕಾರ ತಮಿಳು ಸೇರಿ ದೇಶದ 13 ಪ್ರಮುಖ ಭಾಷೆಗಳಲ್ಲೂ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನಕ್ಸಲ್ ಶರಣಾಗತಿ, ಎನ್‌ಕೌಂಟರ್ ಬಗ್ಗೆ ಅನುಮಾನ, ರಾಜಕೀಯ ಮೈಲೇಜ್‌ಗೋಸ್ಕರ ಶರಣಾಗತಿ ಪ್ರಕ್ರಿಯೆ: ಅಣ್ಣಾಮಲೈ
ಇದನ್ನೂ ಓದಿ: Watch.. ಸ್ವತಃ 7 ಬಾರಿ ಚಾಟಿಯಿಂದ ಹೊಡೆದುಕೊಂಡು ಪ್ರತಿಭಟಿಸಿದ ಅಣ್ಣಾಮಲೈ: ಪಾದರಕ್ಷೆ ಧರಿಸಲ್ಲ ಎಂದು ಪ್ರತಿಜ್ಞೆ