ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುಕ್ಕಾಣಿಯು ಮಹಿಳೆಯರ ಪಾಲಾಗಿದೆ. ಸಿಎಂ ಆಗಿ ಈಗಾಗಲೇ ಬಿಜೆಪಿಯ ರೇಖಾ ಗುಪ್ತಾ ಅವರು ಪದಗ್ರಹಣ ಮಾಡಿದ್ದಾರೆ. ಇದೀಗ, ವಿರೋಧ ಪಕ್ಷದ ನಾಯಕಿಯಾಗಿ ಆಮ್ ಆದ್ಮಿ ಪಕ್ಷದ (ಆಪ್) ಅತಿಶಿ ಅವರು ಆಯ್ಕೆಯಾಗಿದ್ದಾರೆ.
ಭಾನುವಾರ ಇಲ್ಲಿ ನಡೆದ ಆಪ್ ಶಾಸಕಾಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ 22 ಶಾಸಕರು ಭಾಗವಹಿಸಿದ್ದರು.
I congratulate Atishi ji for being elected as Leader of AAP in the House. AAP will play the role of constructive opposition in the interest of people of Delhi
— Arvind Kejriwal (@ArvindKejriwal) February 23, 2025
ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಪ್ನ ಹಿರಿಯ ನಾಯಕ ಗೋಪಾಲ್ ರೈ, "ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪಕ್ಷಕ್ಕೆ ಇದು ಸವಾಲಿನ ಸಮಯ. ಅತಿಶಿ ಅವರು ದೆಹಲಿಯ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ, ವಿಪಕ್ಷ ನಾಯಕಿಯಾಗಿ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನೂತನ ವಿಪಕ್ಷ ನಾಯಕಿ ಅತಿಶಿ, "ಆಡಳಿತಾರೂಢ ಬಿಜೆಪಿಯು ನೀಡಿದ ಭರವಸೆಗಳನ್ನು ಈಡೇರಿಸುವಂತೆ ಸಮರ್ಥ ವಿಪಕ್ಷವಾಗಿ ಆಪ್ ಕೆಲಸ ಮಾಡಲಿದೆ. ಮಹಿಳೆಯರಿಗೆ ಮಾಸಿಕ 2500 ರೂ.ಗಳ ನೆರವು ನೀಡುವ ಯೋಜನೆಯನ್ನು ಜಾರಿಗೆ ತರುವ ನಿರ್ಧಾರವನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೊದಲ ಸಂಪುಟ ಸಭೆಯಲ್ಲಿ ಅಂಗೀಕರಿಸಿಲ್ಲ" ಎಂದರು.
"ದೆಹಲಿಯ ಜನರು ನಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಜನರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವುದು ಹೇಗೆಂದು ನಮಗೆ ತಿಳಿದಿದೆ. ಆಪ್ ಆ ಜವಾಬ್ದಾರಿಯನ್ನು ನಿಭಾಯಿಸಲಿದೆ. ಬಿಜೆಪಿ ಅನೇಕ ಭರವಸೆಗಳನ್ನು ನೀಡಿದ್ದು, ಅವುಗಳ ಆಧಾರದ ಮೇಲೆ ಜನರು ಅಧಿಕಾರ ನೀಡಿದ್ದಾರೆ. ಎಲ್ಲ ಭರವಸೆಗಳನ್ನು ಈಡೇರಿಸುವಂತ ನಾವು ಕಾವಲು ಕಾಯಲಿದ್ದೇವೆ" ಎಂದು ಅತಿಶಿ ಹೇಳಿದರು.
ಅತಿಶಿಗೆ ಕೇಜ್ರಿವಾಲ್ ಅಭಿನಂದನೆ : ಚುನಾವಣೆಯಲ್ಲಿ ಸೋಲುಂಡಿರುವ ಕೇಜ್ರಿವಾಲ್ ಅವರು ವಿಪಕ್ಷ ನಾಯಕಿಯಾಗಿ ಆಯ್ಕೆಯಾದ ಅತಿಶಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ವಿಧಾನಸಭೆಯಲ್ಲಿ ಎಎಪಿ ನಾಯಕಿಯಾಗಿ ಆಯ್ಕೆಯಾದ ಅತಿಶಿ ಅವರಿಗೆ ಅಭಿನಂದನೆಗಳು. ದೆಹಲಿ ಜನರ ಹಿತದೃಷ್ಟಿಯಿಂದ ಎಎಪಿ ರಚನಾತ್ಮಕ ವಿರೋಧ ಪಕ್ಷದ ಪಾತ್ರವನ್ನು ವಹಿಸುತ್ತದೆ" ಎಂದಿದ್ದಾರೆ.
ದೆಹಲಿ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 10 ವರ್ಷ ಆಡಳಿತದಲ್ಲಿದ್ದ ಆಪ್ ಪಕ್ಷವು ಹೀನಾಯ ಸೋಲು ಕಂಡಿತು. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯ 48 ಸ್ಥಾನಗಳಲ್ಲಿ ಗೆದ್ದು 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆಪ್ ಕೇವಲ 22 ಸ್ಥಾನ ಮಾತ್ರ ಪಡೆಯಿತು.
ಇದನ್ನೂ ಓದಿ: ಮಾ.8ರಂದು ಮಹಿಳಾ ದಿನ: ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ