ಬೆಂಗಳೂರು : ಉದಯಗಿರಿ ಘಟನೆ ಹಿನ್ನೆಲೆಯಲ್ಲಿ ಸೋಮವಾರ ಮೈಸೂರು ಚಲೋ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದರು. ಜಯನಗರದಲ್ಲಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಆಲಿಸಿ ಬಳಿಕ ಮಾತನಾಡಿದ ಅವರು, ನಾನು ಮೈಸೂರಿಗೆ ತೆರಳಲಿದ್ದೇನೆ. ರಾಜ್ಯ ಸರ್ಕಾರ ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಉದಯಗಿರಿ ಘಟನೆ, ಪೊಲೀಸ್ ಠಾಣೆಗೆ ಪುಡಾರಿಗಳು ನುಗ್ಗಿ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಸರ್ಕಾರದಿಂದ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದರೋಡೆ ಕೊಲೆಗಳು ನಡೆಯುತ್ತಿವೆ. ಬೆಂಗಳೂರು ಸುರಕ್ಷಿತವಾಗಿಲ್ಲ. ಇದೆಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ರಾಜೀನಾಮೆ ಕೊಡಬೇಕೇ? ಅಥವಾ ಕೊಡುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕತನದ ಪರಮಾವಧಿ. ಕಾನೂನು- ಸುವ್ಯವಸ್ಥೆ ಕಾಪಾಡಿ ಅಭಿವೃದ್ಧಿ ಮಾಡಬೇಕೆಂದು ನಿಮಗೆ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಅದನ್ನು ಮಾಡದೇ ಈ ರೀತಿ ಹೇಳಿಕೆ ನೀಡಿದರೆ ದೇಶದ್ರೋಹಿಗಳು, ಕೊಲೆಗಡುಕರಿಗೆ ಆನೆಬಲ ಬಂದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ವಿರುದ್ಧ ಪಿತೂರಿ ಸಹಿಸಲಸಾಧ್ಯ : ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ರಾಜ್ಯದ ವಿರುದ್ಧ ಪಿತೂರಿ ಸಹಿಸಲಸಾಧ್ಯ. ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ನೆಲದಲ್ಲಿ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕು. ಷಡ್ಯಂತ್ರ, ಪಿತೂರಿ ಮಾಡುವವರನ್ನು ಸರ್ಕಾರ ಹತ್ತಿಕ್ಕಬೇಕಿದೆ ಎಂದು ಆಗ್ರಹಿಸಿದರು.
ಇದನ್ನೂ ಓದಿ: ನಾನು ಬಿಜೆಪಿ ವ್ಯವಸ್ಥೆಯಿಂದ ಬೇಸತ್ತು ದೂರ ಉಳಿದಿದ್ದೇನೆ: ಶಾಸಕ ಶಿವರಾಮ್ ಹೆಬ್ಬಾರ್