ಕಲಬುರಗಿ : ಜಿಲ್ಲೆಯ ಕಾಳಗಿ ತಾಲೂಕಿನ ಮಲಘಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಐವರು ವಿದ್ಯಾರ್ಥಿಗಳು ಹೊಟ್ಟೆನೋವು, ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿ, ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಶಾಲೆಗೆ ಬಂದಿರುವ 16 ವಿದ್ಯಾರ್ಥಿಗಳಿಗೆ ಪುನಃ ಅದೇ ತರಹದ ಹೊಟ್ಟೆ ನೋವು, ತಲೆಸುತ್ತು ಲಕ್ಷಣಗಳು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ತಕ್ಷಣ ಶಿಕ್ಷಕರು, ಪಾಲಕರು ಮಕ್ಕಳನ್ನು ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ತಿಳಿಸಿದ್ದಾರೆ.
"ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾಗಿರುವುದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಕ್ಕಳು ಆಹಾರ ಸೇವಿಸದೆ ಶಾಲೆಗೆ ಬಂದಿರಬಹುದು, ಕುಡಿಯುವ ನೀರಿನಲ್ಲಿ ವ್ಯತ್ಯಾಸ, ಬಿಸಿಲು ಮತ್ತು ವಾತಾವರಣದಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗಿರಬಹುದು, ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳಿಗೆ ಅಲ್ಪ ಪ್ರಮಾಣದ ಫುಡ್ ಪಾಯಿಸನ್ ಆಗಿರುವುದರಿಂದ ಅಸ್ವಸ್ಥಗೊಂಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಜಿಲ್ಲಾ ಕಾಲರಾ ಕಂಟ್ರೋಲ್ ತಂಡ ಶಾಲೆಗೆ ಭೇಟಿ ನೀಡಿದ್ದು, ವರದಿ ನಂತರ ಕಾರಣ ತಿಳಿಯಲಿದೆ" ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜಯ ಗೋಳೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಬಿಸಿಯೂಟ ಅಧಿಕಾರಿ ಪ್ರಕಾಶ್ ನೈಕೊಡಿ, ಬಿಆರ್ಪಿ ರಮೇಶ್ ಮಠದ, ಗೋಟೂರ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ಕಮಕನೂರ, ಪಿಡಿಒ ಗುರುನಾಥ್ ರಾಠೋಡ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಮಕ್ಕಳಿಗೆ ಬಿಸಿಯೂಟ ಬಡಿಸದೆ ಬಿಸ್ಕೆಟ್ ಮತ್ತು ಒಆರ್‌ಎಸ್ ನೀಡಿದರು.
ಇದನ್ನೂ ಓದಿ: ತುಮಕೂರು: ಹಾಸ್ಟೆಲ್ ಊಟದ ಬಳಿಕ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ