ಭೋಪಾಲ್: ಪ್ರತಿಯೊಬ್ಬ ಭಾರತೀಯರ, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಹೊರೆಯಾಗುತ್ತಿರುವ ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
"2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ವಿಪರೀತವಾಗಿದ್ದವು. ಆದರೆ ನಾಗರಿಕರ ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಕಡಿಮೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಎಲ್ಲಾ ಅರ್ಹ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸುವ ಆಯುಷ್ಮಾನ್ ಕಾರ್ಡ್ಗಳನ್ನು ನಾವು ನೀಡುತ್ತಿದ್ದೇವೆ." ಎಂದು ಮಧ್ಯಪ್ರದೇಶದ ಛತ್ತಾಪುರ ಜಿಲ್ಲೆಯಲ್ಲಿ ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಪ್ರಧಾನಿ ಹೇಳಿದರು.
ಹಲವಾರು ಧಾರ್ಮಿಕ ಸಂಸ್ಥೆಗಳು ಜೀವನದ ಆಧ್ಯಾತ್ಮಿಕ ಪಾಠಗಳ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಜನರಿಗೆ ಸೇವೆ ಸಲ್ಲಿಸುತ್ತಿವೆ. ಚಿತ್ರಕೂಟ ಇದಕ್ಕೆ ಒಂದು ಉದಾಹರಣೆಯಾಗಿದೆ. ಇನ್ನು ಮುಂದೆ ಬಾಗೇಶ್ವರ ಧಾಮಕ್ಕೆ ಭೇಟಿ ನೀಡುವ ಜನ ಕೂಡ 'ಆರೋಗ್ಯ'ದ ಆಶೀರ್ವಾದ ಪಡೆಯಲಿದ್ದಾರೆ" ಎಂದು ಅವರು ನುಡಿದರು.
"70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಆಯುಷ್ಮಾನ್ ಕಾರ್ಡ್ ಹೊಂದಿರುವವರು ಈಗ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಅರ್ಹ ಎಲ್ಲರೂ ಆಯುಷ್ಮಾನ್ ಕಾರ್ಡ್ ಅನ್ನು ಪಡೆದುಕೊಳ್ಳಿ. ಆಯುಷ್ಮಾನ್ ಕಾರ್ಡ್ ನೀಡಲು ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ಪತ್ರ ಬರೆಯಿರಿ" ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಮಾಜದಲ್ಲಿ ಆಯುಷ್ಮಾನ್ ಕಾರ್ಡ್ ನಂತಹ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಕರೆ ನೀಡಿದರು. ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜಟಾಶಂಕರ್ ಮಹಾದೇವರಿಗೆ ಪೂಜೆ ಸಲ್ಲಿಸಿ ಧಾರ್ಮಿಕ ಗುರುಗಳಿಂದ ಆಶೀರ್ವಾದ ಪಡೆದರು.
ಬಾಗೇಶ್ವರ್ ಧಾಮದಲ್ಲಿ 200 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ ಯಂತ್ರಗಳು ಹಾಗೂ ತಜ್ಞ ವೈದ್ಯರನ್ನು ಹೊಂದಲಿದ್ದು, ಬಡಜನರಿಗೆ ಉಚಿತ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿದೆ.
ಪ್ರಧಾನಿ ಮೋದಿ ಎರಡು ದಿನಗಳ ಮಧ್ಯಪ್ರದೇಶ ಪ್ರವಾಸದಲ್ಲಿದ್ದು, ಬಾಗೇಶ್ವರ ಧಾಮ್ ನಿಂದ ರಾಜ್ಯ ರಾಜಧಾನಿ ಭೋಪಾಲ್ ಗೆ ಆಗಮಿಸಲಿದ್ದಾರೆ. ಭೋಪಾಲ್ನಲ್ಲಿ, ಪ್ರಧಾನಿ ಮೋದಿ ಅವರು ಕುಶಭಾವು ಠಾಕರೆ ಸಭಾಂಗಣದಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಎಲ್ಲಾ ಬಿಜೆಪಿ ಸಂಸದರು ಮತ್ತು ಶಾಸಕರು ಮತ್ತು ಪಕ್ಷದ ಸಾಂಸ್ಥಿಕ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ಏಪ್ರಿಲ್ 8,9 ರಂದು ಅಹಮದಾಬಾದ್ನಲ್ಲಿ ಎಐಸಿಸಿ ಅಧಿವೇಶನ: ಎಲ್ಲಾ ಪ್ರಮುಖ ನಾಯಕರು ಭಾಗಿ - AICC SESSION