ವಿಶೇಷ ವರದಿ - ವೆಂಕಟ್ ಪೊಳಲಿ
ಬೆಂಗಳೂರು: ಪರಿಶಿಷ್ಠ ಜಾತಿ ಒಳ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ. ಎರಡು ತಿಂಗಳೊಳಗೆ ವರದಿ ನೀಡುವ ಕಾಲಮಿತಿ ಹೊಂದಿರುವ ನಾಗಮೋಹನ್ ದಾಸ್ ಆಯೋಗ ಸದ್ಯ ಪರಿಶಿಷ್ಟ ಜಾತಿಗೆ ಸೇರಿದ ಸರ್ಕಾರಿ ಸಿಬ್ಬಂದಿ ವರ್ಗ, ಫಲಾನುಭವಿಗಳು, ವಿದ್ಯಾರ್ಥಿಗಳು, ಉಪನ್ಯಾಸಕರ ಉಪಜಾತಿಯ ಮಾಹಿತಿ ಕಲೆ ಹಾಕುತ್ತಿದೆ. ಈ ನಿಟ್ಟಿನಲ್ಲಿ ಇಲಾಖಾವಾರು ನುರಿತ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾಹಿತಿ ಸಂಗ್ರಹ ವಿಳಂಬವಾಗುತ್ತಿರುವ ಕಾರಣ ಆಯೋಗ ಕಾಲಮಿತಿಯೊಳಗೆ ವರದಿ ಸಿದ್ಧಪಡಿಸುವುದು ಅನುಮಾನವಾಗಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ 2024ರ ಡಿ.2 ರಂದು ನಿವೃತ್ತ ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ಆದೇಶ ಹೊರಡಿಸಿತ್ತು. ಆದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಬಗ್ಗೆ ಸೂಕ್ತ ಶಿಫಾರಸುಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ಆಯೋಗಕ್ಕೆ ಸೂಚಿಸಲಾಗಿದೆ. ಜನವರಿಯಿಂದ ಆಯೋಗ ಕಾರ್ಯಾರಂಭಿಸಿದ್ದು, ಫೆಬ್ರವರಿ ಅಂತ್ಯದವರೆಗೆ ಕಾಲಾವಕಾಶ ಇದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಟ್ಟು 101 ಜಾತಿಗಳಿವೆ. ಈ ಪೈಕಿ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಉಪ ಜಾತಿಗಳು ಯಾವ ಜಾತಿಗೆ ಸೇರಿವೆ ಎಂಬ ಗೊಂದಲವನ್ನೂ ಇತ್ಯರ್ಥಪಡಿಸಬೇಕಾಗಿದೆ. ದಾಖಲೆ, ಪುರಾವೆ, ಅಂತರ್ ಹಿಂದುಳಿದಿರುವಿಕೆ ಇನ್ನಿತರ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕ ಮತ್ತು ತರ್ಕಬದ್ಧವಾಗಿ ಎಸ್‌ಸಿ ಮೀಸಲು ವರ್ಗೀಕರಣದ ವರದಿ ಸಿದ್ಧಪಡಿಸುವ ಜವಾಬ್ದಾರಿ ಆಯೋಗದ್ದಾಗಿದೆ.
ಎರಡು ತಿಂಗಳೊಳಗೆ ವರದಿ ನೀಡುವ ಸವಾಲನ್ನು ಹೊಂದಿರುವ ನಾಗಮೋಹನ್ ದಾಸ್ ಆಯೋಗ, ಎಲ್ಲಾ ಇಲಾಖೆಗಳಿಗೆ ಪತ್ರ ಬರೆದು ಪರಿಶಿಷ್ಟ ಜಾತಿಯ ಸಿಬ್ಬಂದಿ ವರ್ಗದ ಉಪಜಾತಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು. ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹ ಸಾಧ್ಯವಾಗದ ಕಾರಣ ಇದೀಗ ಆಯೋಗ ಮತ್ತೆ ಪತ್ರ ಬರೆದು ಮಾಹಿತಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ಇಲಾಖೆಗಳಿಗೆ ಮತ್ತೆ ಪತ್ರ ಬರೆದು ಬೇಗ ಮಾಹಿತಿ ನೀಡಲು ಸೂಚನೆ : ನ್ಯಾ. ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಎಲ್ಲ ಇಲಾಖೆಗಳು, ನಿಗಮ-ಮಂಡಳಿಗಳ ಮುಖ್ಯಸ್ಥರಿಗೆ ಜ.10ರಂದು ಪತ್ರ ಬರೆದು, ಪರಿಶಿಷ್ಟ ಜಾತಿ ಹಾಗೂ ಉಪ ಜಾತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂಕಿ-ಅಂಶಗಳನ್ನು ಸಲ್ಲಿಸಲು ತಿಳಿಸಿತ್ತು. ಇದಕ್ಕಾಗಿ ಅನುಬಂಧದ ನಮೂನೆಯನ್ನು ಕಳುಹಿಸಿ ಜ.24ರ ಗಡುವು ನೀಡಿತ್ತು. ಆದರೆ, ಆಯೋಗಕ್ಕೆ ಅವಶ್ಯವಿರುವ ಮಾಹಿತಿಯು ನಿಗದಿತ ನಮೂನೆಯಲ್ಲಿ ಇಲಾಖೆಗಳಿಂದ ಸ್ವೀಕೃತಗೊಂಡಿಲ್ಲ.
ಈ ಹಿನ್ನೆಲೆ ಫೆ.7ಕ್ಕೆ ಮತ್ತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದ ನಾಗಮೋಹನ್ ದಾಸ್, ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತಂತೆ ಸರ್ಕಾರಕ್ಕೆ ಜರೂರಾಗಿ ವರದಿ ಸಲ್ಲಿಸಬೇಕಾಗಿರುವುದರಿಂದ ಸರ್ಕಾರದ ವಿವಿಧ ಇಲಾಖೆ/ನಿಗಮ/ ಮಂಡಳಿ/ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ-ಬೋಧಕೇತರ ಪರಿಶಿಷ್ಟ ಜಾತಿಯ ಅಧಿಕಾರಿ/ನೌಕರರ ಉಪಜಾತಿಗಳ ಬಗ್ಗೆ ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಬಗ್ಗೆ ನಿಗದಿತ ಅನುಬಂಧಗಳಲ್ಲಿ ಮಾಹಿತಿಯನ್ನು ಸಲ್ಲಿಸಲು ಕೋರಿ ಈಗಾಗಲೇ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳಿಗೆ ಪತ್ರ ಬರೆಯಲಾಗಿರುತ್ತದೆ. ಆದರೆ ಈವರೆಗೂ ಆಯೋಗಕ್ಕೆ ಅವಶ್ಯವಿರುವ ಮಾಹಿತಿ ನಿಗದಿತ ನಮೂನೆಯಲ್ಲಿ ಇಲಾಖೆಗಳಿಂದ ಸ್ವೀಕೃತಗೊಂಡಿರುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಈ ಹಿನ್ನೆಲೆ ಪ್ರಸ್ತುತ ಪರಿಷ್ಕೃತಗೊಳಿಸಿದ ನಮೂನೆಗಳಲ್ಲಿ ಮಾಹಿತಿಯನ್ನು ಪಡೆಯಲು ಫಾರ್ಮೆಟ್ ಅನ್ನು ಸಿದ್ಧಪಡಿಸಿ ಆನ್ಲೈನ್ ಮೂಲಕ ಸಲ್ಲಿಸಲು ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದನ್ನು ಸಮಾಜ ಕಲ್ಯಾಣ ಇಲಾಖೆಯ website-www.sw.kar.nic.in ನಲ್ಲಿ ಹಾಕಲಾಗಿದೆ. ಮಾಹಿತಿಯನ್ನು ಸಂಗ್ರಹಿಸಿ ವೆಬ್ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡಲು ಪ್ರತಿ ಇಲಾಖೆಯಲ್ಲಿ ತಾಂತ್ರಿಕ ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಕೋರಿದ್ದಾರೆ.
ಆಯೋಗಕ್ಕೆ, ಸದರಿ ಕಾರ್ಯವನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಕಾಲಾವಕಾಶ ಕಡಿಮೆ ಇರುವುದರಿಂದ ಇಲಾಖಾವಾರು ನೇಮಕಗೊಂಡಿರುವ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಇಲಾಖೆ/ನಿಗಮ/ಮಂಡಳಿ/ಸಂಸ್ಥೆಗಳಲ್ಲಿನ ಪರಿಶಿಷ್ಟ ಸಿಬ್ಬಂದಿಗಳಿಂದಲೇ ಸದರಿಯವರ ಉಪಜಾತಿಯ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದು ಕ್ರೋಢೀಕರಿಸಿ, ಇಲಾಖೆಗಳ ಒಟ್ಟಾರೆ ವೃಂದವಾರು ಸಂಖ್ಯೆಯನ್ನು ಮಾತ್ರ ವೆಬ್ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡುವಂತೆ ಸೂಚನೆ ನೀಡಿದ್ದಾರೆ.
ನಾಗಮೋಹನ್ ದಾಸ್ ಪತ್ರದ ಮೇರೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಫೆ.14ಕ್ಕೆ ಇಲಾಖಾವಾರು ಮುಖ್ಯಸ್ಥರಿಗೆ ಪತ್ರ ಬರೆದು, www.sw.kar.nic.in ನಲ್ಲಿ ಅಭಿವೃದ್ಧಿಗೊಳಿಸಿರುವ ವೆಬ್ ಪೋರ್ಟಲ್ ನಲ್ಲಿ ಸಂಬಂಧಪಟ್ಟ ಇಲಾಖೆಗಳ ಅವರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೊಳಪಡುವ ಇಲಾಖೆ/ ನಿಗಮ/ ಮಂಡಳಿ/ ಸಂಸ್ಥೆಗಳ ಗ್ರೂಪ್-ಎ, ಬಿ, ಸಿ & ಡಿ ವೃಂದವಾರು ಮಾಹಿತಿಯನ್ನು ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಪರಿಶಿಷ್ಟ ಜಾತಿಯ ಬೋಧಕ/ಬೋಧಕೇತರ ಸಿಬ್ಬಂದಿಗಳ ಮತ್ತು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಒಟ್ಟಾರೆ ವೃಂದವಾರು ಸಂಖ್ಯೆಯನ್ನು ಇಲಾಖಾವತಿಯಿಂದ ನೇಮಕಗೊಂಡ ನೋಡಲ್ ಅಧಿಕಾರಿಗಳು ನಮೂದಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಆಯೋಗದ ಕಾಲಾವಧಿ ವಿಸ್ತರಣೆ ಸಾಧ್ಯತೆ : ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಆಯೋಗ ವರದಿ ನೀಡುವ ಕಾಲಾವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಆಯೋಗದ ಕಾಲಾವಧಿಯನ್ನು ವಿಸ್ತರಿಸಲು ಸರ್ಕಾರ ಹುನ್ನಾರ ಹೂಡಿದೆ ಎಂದು ಬಿಜೆಪಿ ನಾಯಕರುಗಳು ಆರೋಪಿಸಿದ್ದಾರೆ. ಈಗಾಗಲೇ ಆಯೋಗದಿಂದ ಒಳಮೀಸಲಾತಿ ಸಂಬಂಧ ಸಂಘ, ಸಂಸ್ಥೆಗಳು, ಪರಿಶಿಷ್ಟ ಜಾತಿ ಸಂಘಟನೆಗಳು, ಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ. ಈಗ ಪರಿಶಿಷ್ಟ ಜಾತಿಯ ಸಿಬ್ಬಂದಿ ವರ್ಗದ ಉಪಜಾತಿಗಳ ಮಾಹಿತಿ ಸಂಗ್ರಹ ವಿಳಂಬವಾಗುತ್ತಿದ್ದು, ಪೂರ್ಣ ಮಾಹಿತಿ ಅಪ್ಡೇಟ್ ಮಾಡಲು ಇನ್ನೂ ಸಮಯ ಬೇಕಾಗಬಹುದು. ಇವೆಲ್ಲವನ್ನೂ ಪರಾಮರ್ಶಿಸಿ ವರದಿ ತಯಾರಿಸಲು ಇನ್ನಷ್ಟು ಸಮಯಾವಕಾಶ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಏನಿದು ಒಳಮೀಸಲಾತಿ ಮರ್ಮ ? 2024 ಆ.1 ರಂದು ರಾಜ್ಯಗಳಿಗೆ ಎಸ್‌ಸಿ ಒಳಮೀಸಲು ಕಲ್ಪಿಸುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತ್ತು. 2024 ಅ.10 ರಂದು ಎಸ್‌ಸಿ ಮೀಸಲು ವರ್ಗೀಕರಣಕ್ಕೆ ಶಿಫಾರಸುಗಳ ಸಹಿತ ವರದಿ ಸಲ್ಲಿಸಲು ಏಕ ಸದಸ್ಯ ವಿಚಾರಣಾ ಆಯೋಗ ನೇಮಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. 2024 ನ.12 ರಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿತ್ತು. 2025ರ ಜ.1 ರಂದು ನಿಯಮಗಳಂತೆ ನ್ಯಾ. ಎಚ್.ಎನ್.ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ಅಧಿಕೃತವಾಗಿ ಕಾರ್ಯಾರಂಭಿಸಿತು.
ರಾಜ್ಯಗಳಿಗೆ ಎಸ್‌ಸಿ ಮೀಸಲು ವರ್ಗೀಕರಣದ ಅಧಿಕಾರವಿದೆ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್, ವರ್ಗೀಕರಣಕ್ಕೆ ಅನುಸರಿಸಬೇಕಾದ ಮಾನದಂಡಗಳನ್ನು ಸ್ಪಷ್ಟವಾಗಿ ತಿಳಿಸಿದೆ. ನಿಗಮ-ಮಂಡಳಿಗಳು ಸೇರಿ ಸರ್ಕಾರಿ ಉದ್ಯೋಗದಲ್ಲಿ ಸಮಾನ ಪ್ರಾತಿನಿಧ್ಯ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆ ಆಧಾರದಲ್ಲಿ ನಿಖರ ದತ್ತಾಂಶ ಸಂಗ್ರಹಿಸಿ ಒಳಮೀಸಲು ಕಲ್ಪಿಸಬೇಕು ಎಂದು ತಿಳಸಿದೆ. ಈ ನಿಟ್ಟಿನಲ್ಲಿ ಆಯೋಗ ನಿಖರ ದತ್ತಾಂಶ ಸಂಗ್ರಹದ ಕಸರತ್ತು ನಡೆಸುತ್ತಿದೆ.
"ಆಯೋಗ ಕಾರ್ಯಾರಂಭಿಸಿದ ನಂತರ ಒಂದು ಹಂತದ ಕೆಲಸಗಳು ಮುಗಿದಿವೆ. ನಿಗದಿಪಡಿಸಿದ ಗಡುವಿನೊಳಗೆ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಕಾಲಮಿತಿಯೊಳಗೆ ವರದಿ ನೀಡಲು ಸಾಧ್ಯವಾಗದಿದ್ದರೆ ಕಾಲಾವಧಿ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ" ಎಂದು ಏಕ ಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ ನ್ಯಾ. ಎಚ್.ಎನ್. ನಾಗಮೋಹನ್‌ದಾಸ್ ತಿಳಿಸಿದ್ದಾರೆ.
ಇದನ್ನೂ ಓದಿ: 2024-25 ಸಾಲಿನ ಇಲಾಖಾವಾರು ಬಜೆಟ್ ಅನುಷ್ಠಾನದ ಸ್ಥಿತಿಗತಿ ಹೇಗಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ