ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ಇಡ್ಲಿ, ದೋಸೆ ಮತ್ತು ವಡೆ ಮಿಶ್ರಣ ಪೌಡರ್‌ಗಳು ಲಭ್ಯವಿದೆ. ಇಂದಿನ ಅವಸರದ ಜೀವನದಲ್ಲಿ ಬೆಳಗ್ಗೆ ತಿಂಡಿ ಮಾಡಲು ಸಮಯವಿಲ್ಲದ ಅನೇಕ ಜನರು ಇವುಗಳನ್ನು ಖರೀದಿಸಿ ಬಳಸುತ್ತಿದ್ದಾರೆ. ಆದರೆ ನಾವು ಹೇಳುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಹೊರಗಿನಿಂದ ಖರೀದಿಸದೆಯೇ ನೀವು ಮನೆಯಲ್ಲಿಯೇ ದೋಸೆ ಮಿಕ್ಸ್ ಪೌಡರ್ ತಯಾರಿಸಬಹುದು. ಸರಳವಾಗಿ ದೋಸೆ ಮಿಕ್ಸ್ ಪೌಡರ್ ಮಾಡುವುದು ಹೇಗೆ ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ.
ನಾವು ಹೇಳುವ ಅಳತೆಗಳೊಂದಿಗೆ ನೀವು ದೋಸೆ ಮಿಶ್ರಣ ಪುಡಿಯನ್ನು ತಯಾರಿಸಿದರೆ, ನೀವು ಯಾವುದೇ ಸಮಯದಲ್ಲಿ ರುಚಿಕರವಾದ ದೋಸೆಗಳನ್ನು ಮಾಡಬಹುದು.
ಬೇಕಾಗುವ ಪದಾರ್ಥಗಳು:
- ಅಕ್ಕಿ- ಅರ್ಧ ಕೆ.ಜಿ
- ಉದ್ದಿನ ಬೇಳೆ - ಅರ್ಧ ಕೆ.ಜಿ
- ಅವಲಕ್ಕಿ- ಕಾಲು ಕಪ್
- ಹೆಸರು ಬೇಳೆ- ಕಾಲು ಕಪ್
- ಮೆಂತ್ಯ- ಒಂದು ಚಮಚ
ತಯಾರಿಸುವ ವಿಧಾನ:
- ಮೊದಲು ಒಲೆಯ ಮೇಲೆ ಪ್ಯಾನ್ ಇರಿಸಿ ಉದ್ದಿನ ಬೇಳೆಯನ್ನು ಸ್ವಲ್ಪ ಹೊತ್ತು ಹುರಿದುಕೊಳ್ಳಿ. ಬಣ್ಣ ಬದಲಾಗದಂತೆ ಹುರಿದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ
- ನಂತರ ಅದೇ ಬಾಣಲೆಗೆ ಅಕ್ಕಿ ಹಾಕಿ ಹುರಿಯಿರಿ. ಅಕ್ಕಿಯನ್ನು ಕೂಡ ಸ್ವಲ್ಪ ಸಮಯದವೆರೆಗೆ ಬಣ್ಣ ಬದಲಾಗದಂತೆ ಹುರಿದು ಪಕ್ಕಕ್ಕೆ ಇಡಬೇಕು.
- ಅದೇ ಬಾಣಲೆಗೆ ಹೆಸರು ಬೇಳೆಯನ್ನು ಹಾಕಿ ಹುರಿಯಿರಿ. ನಂತರ ಅವಲಕ್ಕಿ ಹಾಗೂ ಮೆಂತ್ಯ ಬೀಜಗಳನ್ನು ಸೇರಿಸಿ, ಹುರಿದು ತಟ್ಟೆಯಲ್ಲಿ ಹಾಕಿಡಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಿಸಬೇಕು.
- ನಂತರ ಮಿಕ್ಸ್ ಜಾರ್ ತೆಗೆದುಕೊಂಡು ಅದಕ್ಕೆ ಹುರಿದು ತಣ್ಣಗಾದ ಉದ್ದಿನ ಬೇಳೆ, ಅವಲಕ್ಕಿ, ಅಕ್ಕಿ ಮಿಶ್ರಣವನ್ನು ಹಾಕಿ ನುಣ್ಣಗೆ ಪುಡಿ ಮಾಡಿ.
- ನಂತರ ಪುಡಿ ಮಾಡಿದ ಹಿಟ್ಟನ್ನು ಒಮ್ಮೆ ಶೋಧಿಸಿ ಮತ್ತೊಮ್ಮೆ ಮಿಕ್ಸ್ ಜಾರ್ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಆಗ ಮಾತ್ರ ದೋಸೆ ಮಿಶ್ರಣದ ಪುಡಿ ಮೃದುವಾಗುತ್ತದೆ.
- ಈ ದೋಸೆ ಮಿಶ್ರಣದ ಪುಡಿ ಸಂಪೂರ್ಣವಾಗಿ ತಣ್ಣಗಾದ ನಂತರ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಡಿ. ಈ ಮಿಶ್ರಣವನ್ನು ಎರಡು ತಿಂಗಳವರೆಗೆ ಸಂಗ್ರಹಿಸಿಡಬಹುದು.
- ಈ ಮಿಶ್ರಣವನ್ನು ನೀವು ಹುಳಿ ಬರಿಸಿಯೂ ದೋಸೆ ಮಾಡಬಹುದು. ಅಥವಾ ಇನ್ಸ್ಟಂಟ್ ದೋಸೆಯೂ ಮಾಡಬಹುದು.
- ಒಂದು ಮಿಕ್ಸಿಂಗ್ ಬೌಲ್ನಲ್ಲಿ ಎರಡು ಕಪ್ ದೋಸೆ ಮಿಕ್ಸ್ ಸ್ವಲ್ಪ ಅಡುಗೆ ಸೋಡಾ, ಉಪ್ಪು ಮತ್ತು ಸಾಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ದೋಸೆ ಹಿಟ್ಟು ತಯಾರಾಗುತ್ತದೆ.
- ಈ ಹಿಟ್ಟಿನಿಂದ ನೀವು ಗರಿಗರಿಯಾದ ದೋಸೆಗಳನ್ನು ಮಾಡಬಹುದು.
- ಅಥವಾ ಹಿಟ್ಟನ್ನು ಬೆರೆಸಿ ರಾತ್ರಿಯಿಡೀ ಹುದುಗಲು ಬಿಡಬಹುದು. ಬೆಳಗ್ಗೆ ದೋಸೆ ಮಾಡಬಹುದು. ಈ ರೀತಿ ಮಾಡುವುದಾದರೆ ನೀವು ಅಡುಗೆ ಸೋಡಾವನ್ನು ಬಳಸಬೇಕಾಗಿಲ್ಲ.
- ಈ ದೋಸೆ ಮಿಕ್ಸ್ ಪೌಡರ್ ಬಳಸಿ, ಗರಿಗರಿಯಾದ ದೋಸೆಗಳನ್ನು ಕೆಲವೇ ಕ್ಷಣಗಳಲ್ಲಿ ಸಿದ್ಧವಾಗುತ್ತವೆ.
ಇದನ್ನೂ ಓದಿ: ದೋಸೆ ಹಿಟ್ಟಿನಿಂದ ಸೂಪರ್ ಸಾಫ್ಟ್ ಇಡ್ಲಿ ಮಾಡೋದು ಹೇಗೆ? ನಿಮಗಾಗಿ ಇಲ್ಲಿವೆ ತಜ್ಞರ ಟಿಪ್ಸ್