ಚಂಡೀಗಢ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮೂವರು ಸದಸ್ಯರ ಕೇಂದ್ರ ಸರಕಾರದ ನಿಯೋಗ ಮತ್ತು ಪ್ರತಿಭಟನಾನಿರತ ರೈತ ಸಂಘಟನೆಗಳ ನಡುವಿನ ಎರಡನೇ ಸುತ್ತಿನ ಸಭೆ ಶನಿವಾರ ಮಧ್ಯರಾತ್ರಿ ಮೂರು ಗಂಟೆಗಳ ನಂತರ ಸಕಾರಾತ್ಮಕ ಮತ್ತು ಸೌಹಾರ್ದಯುತ ರೀತಿಯಲ್ಲಿ ಮುಕ್ತಾಯಗೊಂಡಿದೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಒಳಗೊಂಡ ತಂಡದ ಸದಸ್ಯರು ಪಂಜಾಬ್ ಸರ್ಕಾರದ ನಿಯೋಗದೊಂದಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಗೆ ಕಾನೂನು ಖಾತರಿ ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳ ಬಗ್ಗೆ ಎರಡು ರೈತ ವೇದಿಕೆಗಳ 28 ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
ರೈತರನ್ನುದ್ದೇಶಿಸಿ ಮಾತನಾಡಿದ ಚೌಹಾಣ್, "ಸರ್ಕಾರವು ರೈತರು ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ನಿಯಮಿತವಾಗಿ ಅಗತ್ಯ ನೀತಿಗಳನ್ನು ರೂಪಿಸುತ್ತಿದೆ" ಎಂದು ಹೇಳಿದರು.
"ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ. ನಾವು ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಸರ್ವನ್ ಸಿಂಗ್ ಪಂಧೇರ್ ಅವರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದೇವೆ. ಚರ್ಚೆಗಳು ಮುಂದುವರಿಯಲಿದ್ದು, ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಚೌಹಾಣ್ ತಿಳಿಸಿದರು.
ರೈತ ಮುಖಂಡರು ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಗತ್ಯ ದತ್ತಾಂಶ ಹಾಗೂ ಮಾಹಿತಿಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರ ರೈತ ಮುಖಂಡರಿಗೆ ಕೋರಿದೆ. ಅದಕ್ಕೆ ರೈತ ಮುಖಂಡರು ಒಪ್ಪಿಕೊಂಡಿದ್ದು, ಈ ದತ್ತಾಂಶಗಳನ್ನು ಆಧರಿಸಿ ಮಾತುಕತೆಗಳು ಮುಂದುವರಿಯಲಿವೆ.
ಪಂಜಾಬ್ ಸರ್ಕಾರದ ಹಣಕಾಸು ಸಚಿವ ಹರ್ಪಾಲ್ ಚೀಮಾ, ಕೃಷಿ ಸಚಿವ ಗುರ್ಮೀತ್ ಸಿಂಗ್ ಖುಡಿಯಾನ್ ಮತ್ತು ಆಹಾರ ಮತ್ತು ಸರಬರಾಜು ಸಚಿವ ಲಾಲ್ ಚಂದ್ ಕಟಾರುಚಕ್ ನಿಯೋಗದ ಮುಂದಾಳತ್ವ ವಹಿಸಿದ್ದರು.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕಳೆದ ವರ್ಷ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ಗಡಿಯ ನಡುವಿನ ಗಡಿ ಬಿಂದುಗಳಾದ ಶಂಭು ಮತ್ತು ಖನೌರಿಯಲ್ಲಿ ಧರಣಿ ನಡೆಸುತ್ತಿವೆ.
ಇದನ್ನೂ ಓದಿ: 'ಕೆಲವು ರಾಜಕೀಯ ಪಕ್ಷಗಳು ಭಾಷೆಯ ಆಧಾರದಲ್ಲಿ ದೇಶವನ್ನು ಇಬ್ಭಾಗಿಸಲು ಬಯಸುತ್ತಿವೆ': ಅಣ್ಣಾಮಲೈ - NEP