ವಿಶೇಷ ವರದಿ- ಹೆಚ್ ಬಿ ಗಡ್ಡದ್
ಹುಬ್ಬಳ್ಳಿ : ಬಂಜೆತನ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಶಾಪವಾಗಿದೆ. ಶ್ರೀಮಂತರು ಅತ್ಯಾಧುನಿಕ ತಂತ್ರಜ್ಞಾನ ಐವಿಎಫ್ ಮೂಲಕ ಮಕ್ಕಳ ಭಾಗ್ಯ ಪಡೆದುಕೊಳ್ಳುತ್ತಾರೆ. ಆದರೆ ಬಡ ಹಾಗೂ ಮಧ್ಯಮ ವರ್ಗದವರಿಗೆ ಇದು ಕನಸಾಗಿತ್ತು. ಆದರೆ ಇದೀಗ ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಐವಿಎಫ್ ಕೇಂದ್ರ ನಗರದ ಕೆಎಂಸಿ ಆರ್‌ಐನಲ್ಲಿ ತೆರೆಯಲಾಗಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.
ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ-ಆರ್‌ಐ) ಕೃತಕ ಗರ್ಭಧಾರಣಾ ಕೇಂದ್ರ ಶೀಘ್ರದಲ್ಲಿ ಆರಂಭವಾಗಲಿದ್ದು, ಇದು ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಆರಂಭಿಸುತ್ತಿರುವ ಸರ್ಕಾರಿ ಕೇಂದ್ರವಾಗಿದೆ.
ಕೆಎಂಸಿ-ಆರ್‌ಐಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ಐವಿಎಫ್ ಕೇಂದ್ರ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಸಿವಿಲ್ ಕಾಮಗಾರಿ ನಡೆಸಲಾಗುತ್ತಿದೆ. ಐವಿಎಫ್ ಕೇಂದ್ರ ಆರಂಭಿಸಲು ಕೆಎಂಸಿ-ಆರ್‌ಐ 2021–22ನೇ ಸಾಲಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಸರ್ಕಾರದ ಅನುದಾನ ನಿರೀಕ್ಷಿಸದೆ ಇತರ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಿ ಕೆಎಂಸಿ-ಆರ್‌ಐನಲ್ಲಿ ಐವಿಎಫ್ ಕೇಂದ್ರ ಆರಂಭಿಸಲಾಗುತ್ತಿದೆ. ಹಟ್ಟಿ ಚಿನ್ನದ ಗಣಿ (ಗೋಲ್ಡ್ ಮೈನ್ಸ್), ಕಲಬುರಗಿಯ ಮಾನವೀಯ ಸಂಸ್ಥೆಯ ನೀಡುವ ಸಿಎಸ್ಆರ್ ದೇಣಿಗೆ ನೆರವಿನಿಂದ ಕಟ್ಟಡ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ.
ಈ ಕುರಿತಂತೆ ಕೆಎಂಸಿ-ಆರ್‌ಐ ನಿರ್ದೇಶಕ ಡಾ. ಎಸ್. ಎಫ್. ಕಮ್ಮಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿರುವ ಪ್ರಥಮ ಐವಿಎಫ್ ಕೇಂದ್ರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೆಎಂಸಿ- ಆರ್‌ಐನ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ಐವಿಎಫ್ ಕೇಂದ್ರದ ಕಾಮಗಾರಿ ಈಗಾಗಲೇ ಶೇ 82 ರಿಂದ 85 ರಷ್ಟು ಮುಗಿದಿದೆ. ಹಟ್ಟಿ ಚಿನ್ನದ ಗಣಿಯಿಂದ ಸಿಎಸ್ಆರ್ ಫಂಡ್ನಿಂದ 46.7 ಲಕ್ಷ ಹಣವನ್ನು ನೀಡಿದೆ. ಕಲಬುರ್ಗಿಯ ಮಾನವ ಕಲ್ಯಾಣ ಟ್ರಸ್ಟ್ ಯಂತ್ರೋಪಕರಣ ಖರೀದಿಗೆ 90 ಲಕ್ಷ ನೆರವು ನೀಡಿದ್ದು, ಟೆಂಡರ್ ಹಂತ ಮುಗಿದು ಎಲ್ಲಾ ಯಂತ್ರೋಪಕರಣಗಳು ಈಗಾಗಲೇ ಬಂದಿವೆ. ಅತೀ ಶೀಘ್ರದಲ್ಲೇ 15 ರಿಂದ 1 ತಿಂಗಳ ಒಳಗೆ ಕೇಂದ್ರ ಪ್ರಾರಂಭ ಮಾಡುವ ಮೂಲಕ ಸಾರ್ವಜನಿಕರಿಗೆ ಮುಕ್ತ ಮಾಡಲಾಗುವದು" ಎಂದು ತಿಳಿಸಿದರು.
"ಇದರ ನಿರ್ವಹಣೆಯನ್ನು ಕೆಎಂಸಿಆರ್ಐ ನೋಡಿಕೊಳ್ಳಲಿದೆ. ಇದಕ್ಕೆ ಬೇಕಾದ ತಜ್ಞ ವೈದ್ಯರು ಚಿಕಿತ್ಸೆ ಕಾರ್ಯ ನಿರ್ವಹಿಸಲಿದ್ದಾರೆ. ಒಬ್ಬ ಆಂಡ್ರೊಲೊಜಿಸ್ಟ್ ಅವಶ್ಯಕತೆ ಇದ್ದು, ಕೇಂದ್ರ ಆರಂಭವಾದ ನಂತರ ತರಬೇತಿ ಕೊಡಿಸಲಾಗುವುದು. ಸರ್ಕಾರ ಕೇಂದ್ರದ ಸಿಬ್ಬಂದಿಯ ವೇತನ, ವೈದ್ಯಕೀಯ ಸೌಲಭ್ಯ ಉಚಿತವಾಗಿ ದೊರೆಯಲಿದೆ. ಔಷಧೋಪಚಾರ ಉಚಿತವಾಗಿ ಕಲ್ಪಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವಣೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಎಬಿಆರ್‌ಕೆ ಅಡಿ ಔಷಧೋಪಚಾರ ಉಚಿತವಾಗಿ ದೊರೆಯುವ ಭರವಸೆ ಇದೆ" ಎಂದರು.
ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಖಾಸಗಿ ಐವಿಎಫ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೃತಕ ಗರ್ಭಧಾರಣೆ ಬಹು ದೊಡ್ಡ ವೈದ್ಯಕೀಯ ಆವಿಷ್ಕಾರವಾಗಿದ್ದು, ಮಕ್ಕಳಾಗದವರು ಈ ಚಿಕಿತ್ಸೆ ಪಡೆಯಲು ಅಂದಾಜು ಗರಿಷ್ಠ ₹50 ಲಕ್ಷದವರೆಗೆ ಖರ್ಚು ಮಾಡುತ್ತಾರೆ. ದುಬಾರಿ ವೆಚ್ಚ ಭರಿಸಿ ಚಿಕಿತ್ಸೆ ಪಡೆಯುವುದು ಬಡ, ಮಧ್ಯಮ ವರ್ಗದ ಜನರಿಗೆ ಇದು ಅಸಾಧ್ಯವಾಗಿದೆ. ಇದೀಗ ಸರ್ಕಾರಿ ಸಂಸ್ಥೆಯ ಕೇಂದ್ರದಲ್ಲಿ ಉಚಿತ ಚಿಕಿತ್ಸೆ ದೊರೆತಲ್ಲಿ ಅಂಥವರಿಗೆ ಅನುಕೂಲವಾಗಲಿದೆ.
ಸಂತಾನ ಹೀನತೆಗೆ ಕಾರಣಗಳೇನು ? ಸಮಾಜದಲ್ಲಿ ಹೆಚ್ಚುತ್ತಿರುವ ಬಂಜೆತನದ ಕಾರಣಕ್ಕೆ ಪರಿಹಾರ ಕಂಡುಕೊಳ್ಳಲು ಹಾಗೂ ದೂರದೃಷ್ಟಿಯ ಹಿನ್ನೆಲೆಯೊಂದಿಗೆ ಐವಿಎಫ್ ಕೇಂದ್ರ ಆರಂಭಿಸುವುದರಿಂದ ಅನುಕೂಲವಾಗಲಿದೆ.
"ಪುರುಷರಲ್ಲಿ ಕಡಿಮೆ ಮತ್ತು ಬಲಿಷ್ಠವಲ್ಲದ ವೀರ್ಯಾಣು ಉತ್ಪತ್ತಿ, ಹಾರ್ಮೋನ್ ವ್ಯತ್ಯಾಸ, ಮಹಿಳೆಯರಲ್ಲಿ ಅಂಡಾಣು ಬೆಳವಣಿಗೆ ಕುಸಿತ, ತಡವಾಗಿ ಮದುವೆಯಾಗುವುದು, ಉದ್ವೇಗ, ದುಶ್ಚಟ, ಜೈವನಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ಸಂತಾನಶಕ್ತಿ ಕ್ಷೀಣಿಸುತ್ತ ಹೋಗುತ್ತದೆ. ಆ ಸಮಸ್ಯೆ ಎದುರಿಸುವವರು ಕೃತಕ ಗರ್ಭಧಾರಣೆ (ಐವಿಎಫ್) ಚಿಕಿತ್ಸೆಯ ಮೊರೆ ಹೋಗುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.
ಸಿಎಂ ಅವರಿಂದ ಉದ್ಘಾಟನೆಗೆ ಚಿಂತನೆ : "ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಕಾಮಗಾರಿ ಹಾಗೂ ಯಂತ್ರೋಪಕರಣಗಳ ಜೋಡಣೆ ಮುಗಿದ ತಕ್ಷಣ ಕಾರ್ಯಾರಂಭ ಮಾಡಲಿದೆ. ಈ ಹಿಂದೆ ಕೆಎಂಸಿ-ಆರ್‌ಐ ಸಂಸ್ಥಾಪನೆಗೆ ಬರುವುದಾಗಿ ಹೇಳಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸುವ ಚಿಂತನೆ ಇದೆ" ಎಂದು ಡಾ. ಎಸ್. ಎಫ್. ಕಮ್ಮಾರ ಮಾಹಿತಿ ನೀಡಿದರು.
ಇದನ್ನೂ ಓದಿ: ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ವೈದ್ಯರ ಸಾಧನೆ; ಒಂದೇ ವಾರದಲ್ಲಿ 3 ಕ್ಲಿಷ್ಟ ಶಸ್ತ್ರಚಿಕಿತ್ಸೆ ಯಶಸ್ವಿ, ಮಹಿಳೆಯರಿಗೆ ಮರುಜನ್ಮ