ರೋಮ್(ಇಟಲಿ): ನ್ಯೂಮೋನಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವ್ಯಾಟಿಕನ್ ಮಾಹಿತಿ ನೀಡಿದೆ.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 88 ವರ್ಷ ವಯಸ್ಸಿನ ಪೋಪ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಸಲಾಗುತ್ತಿದೆ. ಹಾಗೆಯೇ ಪ್ಲೇಟ್‌ಲೆಟ್ಸ್ ಕಡಿಮೆಯಾಗಿದ್ದರಿಂದ ರಕ್ತ ನೀಡಲಾಗುತ್ತಿದೆ ಎಂದು ವ್ಯಾಟಿಕನ್ ತಿಳಿಸಿದೆ.
ಫೆ.14ರಂದು ಆಸ್ಪತ್ರೆಗೆ ದಾಖಲಾದ ಬಳಿಕ ಇದೇ ಮೊದಲ ಸಲ ಪೋಪ್ ಗಂಭೀರವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಲಿಖಿತವಾಗಿ ತಿಳಿಸಲಾಗಿದೆ.
ಪೋಪ್‌ಗೆ ನೋವು ಹೆಚ್ಚಿರುವುದರಿಂದ ಅವರನ್ನು ಆರ್ಮ್ ಚೇರ್ನಲ್ಲಿಯೇ ನಿನ್ನೆ ಇರಿಸಲಾಗಿತ್ತು. ವಯಸ್ಸು, ದುರ್ಬಲತೆ ಮತ್ತು ದೀರ್ಘಕಾಲದಿಂದ ಇರುವ ಶ್ವಾಸಕೋಶ ಸಮಸ್ಯೆಯಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಈಗಲೇ ಏನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಉಸಿರಾಟದ ವ್ಯವಸ್ಥೆಯಲ್ಲಿರುವ ಕೆಲವು ಸೂಕ್ಷ್ಮಜೀವಿಗಳು ರಕ್ತಪ್ರವಾಹಕ್ಕೆ ಹಾದು ಸೆಪ್ಸಿಸ್‌ಗೆ ಕಾರಣವಾಗುತ್ತಿವೆ. ಸೆಪ್ಸಿಸ್ ರೋಗ ಅಂಗಾಂಗ ವೈಫಲ್ಯ ಮತ್ತು ಪ್ರಾಣ ಹಾನಿಕರವಾಗಬಹುದು. ಸೆಪ್ಸಿಸ್ ರೋಗ, ಉಸಿರಾಟದ ಸಮಸ್ಯೆ ಮತ್ತು ಅವರ ವಯಸ್ಸಿನಿಂದಾಗಿ ಪೋಪ್ ಚೇತರಿಸಿಕೊಳ್ಳುವುದು ಕಷ್ಟ ಎಂದು ರೋಮ್‌ನ ಜೆಮೆಲಿ ಆಸ್ಪತ್ರೆಯ ಔಷಧ ಮತ್ತು ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಡಾ.ಸೆರ್ಗಿಯೊ ಅಲ್ಫಿಯೆರಿ ತಿಳಿಸಿದ್ದಾರೆ.
ಚೇತರಿಕೆಗೆ ಜಗತ್ತಿನಾದ್ಯಂತೆ ಪ್ರಾರ್ಥನೆ: ಪೋಪ್ ಫ್ರಾನ್ಸಿಸ್ ಚೇತರಿಕೆಗಾಗಿ ಭಕ್ತರು ಜಗತ್ತಿನಾದ್ಯಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಪೋಪ್ ದಾಖಲಾಗಿರುವ ರೋಮ್‌ನ ಜೆಮೆಲಿ ಆಸ್ಪತ್ರೆಯೆದುರು ಕ್ಯಾಂಡಲ್ ಹಚ್ಚಿ ಭಕ್ತರು ವಿಶೇಷವಾಗಿ ಪ್ರಾರ್ಥನೆ ಮಾಡಿದರು.
ಇದನ್ನೂ ಓದಿ: ವ್ಯಾಟಿಕನ್ನಲ್ಲಿ ಪೋಪ್ ಫ್ರಾನ್ಸಿಸ್ಗೆ ಋಗ್ವೇದದ ಪ್ರತಿ ಉಡುಗೊರೆ ನೀಡಿದ ಕೇರಳದ ಹಿಂದೂ ಮುಖಂಡ
ಇದನ್ನೂ ಓದಿ: ಕಾರ್ಡಿನಲ್ ಆಗಿ ದೀಕ್ಷೆ ಪಡೆದ ಕೇರಳದ ಜಾರ್ಜ್ ಕೂವಕಾಡ್: ಶುಭ ಕೋರಿದ ಪ್ರಧಾನಿ ಮೋದಿ