ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲೋರ್ವರಾದ ದರ್ಶನ್ ಇತ್ತೀಚೆಗೆ ತಮ್ಮ ಜನ್ಮದಿನವನ್ನು ಬಹಳ ಸರಳವಾಗಿ ಆಚರಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ತಮಗೆ ಸದಾ ಸಾಥ್ ನೀಡುತ್ತಾ ಬಂದಿರುವ ಪ್ರೀತಿಯ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ.
ದರ್ಶನ್ ಪೋಸ್ಟ್ನಲ್ಲೇನಿದೆ ? ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಕುದುರೆ ಜೊತೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ ನಟ ದರ್ಶನ್, ''ಪ್ರೀತಿಯ ಸೆಲೆಬ್ರಿಟಿಸ್ ಗಳೇ, ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲ್ಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ. ನಿಮ್ಮ ದಾಸ ದರ್ಶನ್'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೂವರಿಗೆ ಧನ್ಯವಾದ ತಿಳಿಸಿದ ದರ್ಶನ್: ಬರ್ತ್ ಡೇ ಬಗ್ಗೆ 'ಸೆಲೆಬ್ರಿಟಿ'ಗಳಲ್ಲಿ ಕ್ಷಮೆ ಕೋರಿಕೆ
ಅಭಿಮಾನಿಗಳನ್ನು ಸೆಲೆಬ್ರಿಟಿ ಮಾಡಿರುವ ಕೀರ್ತಿ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಅವರಿಗೇನೇ ಸಲ್ಲುತ್ತದೆ. ಅವರು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂದೇ ಕರೆಯುತ್ತಾರೆ. ಇದೀಗ ತಮ್ಮ ಹುಟ್ಟುಹಬ್ಬದ ಬೆನ್ನಲ್ಲೇ, ಫ್ಯಾನ್ಸ್ಗೆ ಥ್ಯಾಂಕ್ಸ್ ತಿಳಿಸಿದ್ದಾರೆ. ಇದೇ ಫೆಬ್ರವರಿ 16ರಂದು ದರ್ಶನ್ 48ನೇ ಜನ್ಮದಿನ ಆಚರಿಸಿಕೊಂಡಿರೋದು ನಿಮಗೆ ತಿಳಿದಿರುವ ವಿಚಾರವೇ.
ಇದನ್ನೂ ಓದಿ: 'ರಾಜಮೌಳಿ ಸಿನಿಮಾಗಳಲ್ಲಿ ಲಾಜಿಕ್ ಇರೋದಿಲ್ಲ, ಬದಲಾಗಿ..': ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್
ಫೆಬ್ರವರಿ 8ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಸಂದೇಶ ಶೇರ್ ಮಾಡಿದ್ದ ದರ್ಶನ್, ''ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ, ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಕ್ಷಮೆ ಇರಲಿ. ಇಂತಿ ನಿಮ್ಮ ದಾಸ ದರ್ಶನ್'' ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆ, ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ಒಳ್ಳೆ ಕಾರ್ಯಗಳ ಮೂಲಕ ಮೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ. ದರ್ಶನ್ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆದುಕೊಳ್ಳುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಹಾಗಾಗಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿರದ ಕಾರಣ ಈ ಬಾರಿ ಅಭಿಮಾನಿಗಳೊಂದಿಗೆ ನಿಂತು ನಟ ತಮ್ಮ ಜನ್ಮದಿನ ಆಚರಿಸಿಕೊಂಡಿಲ್ಲ.