ತುಮಕೂರು: ಊಟದ ಬಳಿಕ 50ಕ್ಕೂ ಹೆಚ್ಚು ಮಕ್ಕಳು ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿರುವ ಘಟನೆ ಬಿಜೆಪಿ ಎಂಎಲ್ಸಿ ಚಿದಾನಂದ ಎಂ.ಗೌಡ ಅವರ ಮಾಲೀಕತ್ವದ ಪ್ರೆಸಿಡೆನ್ಸಿ ಶಾಲೆಯಲ್ಲಿ ನಡೆದಿದೆ.
ಶಿರಾ ನಗರದಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಮಂಗಳವಾರ ರಾತ್ರಿ ಊಟ ಸೇವಿಸಿದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ವಾಂತಿ ಭೇದಿಯಿಂದ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದು, ತಕ್ಷಣವೇ ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ಪ್ರೆಸಿಡೆನ್ಸಿ ವಸತಿ ಶಾಲೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಪ್ರೆಸಿಡೆನ್ಸಿ ಶಾಲೆಗೆ ಭೇಟಿ ನೀಡಿ, ಊಟದ ವ್ಯವಸ್ಥೆ ಪರಿಶೀಲಿಸಿದ ಅಧಿಕಾರಿ ವರ್ಗ, ಮೇಲ್ನೋಟಕ್ಕೆ ಊಟದಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಶಾಲಾ ಮಾಲೀಕ ಚಿದಾನಂದ ಎಂ.ಗೌಡ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಮಧ್ಯಾಹ್ನದ ಊಟದ ಬಳಿಕ ಕೆಲವು ಮಕ್ಕಳು ಸಂಜೆ ಹೊತ್ತಿಗೆ ಹೊಟ್ಟೆ ನೋವು, ವಾಂತಿ ಎಂದು ದೂರು ನೀಡಿದ್ದಾರೆ. ತಕ್ಷಣ ನನಗೂ ಕೂಡ ವಿಷಯ ಗೊತ್ತಾಯಿತು. ನಾನು ವೈದ್ಯರ ಜೊತೆಗೆ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಜೊತೆಗೆ ಮಾತನಾಡಿ, ಮಕ್ಕಳನ್ನು ನೋಡಿಕೊಳ್ಳಲು ಹೇಳಿದೆ. ತಕ್ಷಣ ನಾನೂ ಕೂಡ ಹೊರಟು ಬಂದಿದ್ದೇನೆ. ಎಲ್ಲ ಮಕ್ಕಳು ಆರಾಮಾಗಿದ್ದಾರೆ" ಎಂದರು.
"ಒಂದು ಕೆಲವರಿಗೆ ನಿಜಕ್ಕೂ ವಾಂತಿಯಾಗಿದೆ. ಇನ್ನೂ ಕೆಲವರಿಗೆ ವಾಂತಿ ಮಾಡಿದವರನ್ನು ನೋಡಿ ವಾಂತಿಯಾಗಿದೆ. ಗ್ಯಾಸ್ಟ್ರಿಕ್ನಿಂದ ಅಥವಾ ಸಣ್ಣ ಫುಡ್ ಇನ್ಫೆಕ್ಷನ್ನಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಪೋಷಕರು ಕೂಡ ಯಾವುದೇ ಗಾಬರಿಯಾಗುವ ಅವಶ್ಯಕತೆಯಿಲ್ಲ. ವೈದ್ಯರು ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಯಾಕೆ ಹೀಗಾಯಿತು ಎನ್ನುವುದನ್ನು ತನಿಖೆ ಮಾಡಿ, ವಿವರವನ್ನು ಮುಂದೆ ತಿಳಿಸುತ್ತೇನೆ" ಎಂದು ಹೇಳಿದರು.
"ಮಧ್ಯಾಹ್ನ ಸುಮಾರು 1000 ಮಕ್ಕಳು ಊಟ ಮಾಡಿದ್ದಾರೆ. ಶಿಕ್ಷಕರು ಕೂಡ ಅದೇ ಊಟವನ್ನು ಮಾಡಿದ್ದಾರೆ. ಅದರಲ್ಲಿ 50ರಿಂದ 60 ಮಕ್ಕಳಿಗೆ ಹೀಗಾಗಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆಯಾದರೂ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ಶಾಲೆಗೆ ಸೂಚಿಸಿದ್ದೇನೆ. ಹಾಗಾಗಿ ಪೋಷಕರು ಗಾಬರಿಯಾಗುವ ಅವಶ್ಯಕತೆ ಇಲ್ಲ" ಎಂದು ಹೇಳಿದರು.
ಇದನ್ನೂ ಓದಿ: ತುಮಕೂರು: ಸರ್ಕಾರಿ ವಸತಿ ಶಾಲೆಯ 14 ವಿದ್ಯಾರ್ಥಿಗಳು ಅಸ್ವಸ್ಥ