ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಆಡಲು ತಡಕಾಡಿದ್ದರು. ಅಲ್ಲದೇ ಈ ಪಂದ್ಯದಲ್ಲಿ ಸ್ಪಿನ್ನರ್‌ಗೆ ವಿಕೆಟ್ ಒಪ್ಪಿಸಿದ್ದರು. ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಸ್ಪಿನ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದ ಕೊಹ್ಲಿ ಎರಡೂ ಪಂದ್ಯಗಳಲ್ಲಿ ಆದಿಲ್ ರಶೀದ್ಗೆ ವಿಕೆಟ್ ಒಪ್ಪಿಸಿದ್ದರು.
ಇದೀಗ ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಕೊಹ್ಲಿ ಹಿಂದಿನ ತಪ್ಪು ಸರಿಪಡಿಸಿಕೊಳ್ಳದಿದ್ದರೆ, ಪಾಕ್ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅವರಿಂದಲೂ ಸಂಕಷ್ಟ ತಪ್ಪಿದ್ದಲ್ಲ ಎಂದು ಕ್ರಿಕೆಟ್ ತಜ್ಞರು ಎಚ್ಚರಿಸಿದ್ದಾರೆ. ಇದರ ನಡುವೆಯೇ ವಿರಾಟ್ ಸ್ಪಿನ್ ಬೌಲಿಂಗ್ ಆಡಲು ಏಕೆ ಹೆಣಗಾಡುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
ಭಜ್ಜಿ ಟಿಪ್ಸ್: "ವಿರಾಟ್ ನಿಧಾನಗತಿಯ ಎಸೆತಗಳನ್ನು ಆಡುವಾಗ ಸ್ವಲ್ಪ ಅನಾನುಕೂಲತೆ ಅನುಭವಿಸುತ್ತಾರೆ. ಕೊಹ್ಲಿ ಲೆಗ್‌ಸೈಡ್‌ನಲ್ಲಿ ಬರುವ ಎಸೆತಗಳನ್ನು ಆಡಲು ಅಭ್ಯಾಸ ಮಾಡಬೇಕು. ಅಲ್ಲದೇ ಸ್ಪಿನ್ ಬೌಲಿಂಗ್ ವೇಳೆ ಹೆಚ್ಚಾಗಿ ಸ್ಟ್ರೈಕ್ ರೂಟೆಟ್ ಮಾಡುತ್ತಿದ್ದರೆ ಒತ್ತಡವೂ ಕಡಿಮೆಯಾಗುತ್ತದೆ.
ಅಲ್ಲದೇ, ಕಳಪೆ ಫಾರ್ಮ್ ಸಂದರ್ಭದಲ್ಲಿ ಬೌಂಡರಿ ಬಾರಿಸುವ ಗೋಜಿಗೆ ಹೋಗದೆ ಸಿಂಗಲ್ಸ್‌ನತ್ತ ಗಮನ ಹರಿಸಬೇಕು. ಕ್ರೀಸ್‌ನಲ್ಲಿ ನೆಲೆಯೂರಲು ಎಸೆತಗಳನ್ನು ಸರಿಯಾಗಿ ಗಮನಿಸಬೇಕು. ಆದರೆ, ವಿರಾಟ್ ವಿಷಯದಲ್ಲಿ ಇದುವರೆಗೆ ಹೀಗೆ ಆಗಿಲ್ಲ. ನಾವು ಎಷ್ಟೇ ಉತ್ತಮ ಆಟಗಾರರಾಗಿದ್ದರೂ, ಪಂದ್ಯಕ್ಕೆ ಬಂದಾಗ ಪ್ರದರ್ಶನ ಮುಖ್ಯ. ನೀವು ಆಡುವ ದೃಢನಿಶ್ಚಯ ಹೊಂದಿದ್ದರೆ ಉತ್ತಮ ಸ್ಕೋರ್ ಗಳಿಸಬಹುದು.
ಹೆಚ್ಚು ಕಾಲ ಕ್ರೀಸ್ನಲ್ಲಿದ್ದು ರನ್ಗಳಿಸದೆ ಹೋದಾಗ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ, ಸಿಂಗಲ್ಸ್ ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಆಗ ನಿಮಗೆ ಸೆಟ್ ಆದಂತೆ ಕಾಣಿಸುತ್ತದೆ. ಬಳಿಕ ನೀವು ದೊಡ್ಡ ಹೊಡೆತ ಆಡಲು ಸುಲಭವಾಗುತ್ತದೆ. ಆದಾಗ್ಯೂ, ಕೊಹ್ಲಿ ತಾನು ಏನೆಂದು ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ಆದರೆ ಅವರು ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಬೇಕು ಅಷ್ಟೇ. ನೀವು ಆಟವನ್ನು ಆನಂದಿಸಿದರೆ ಆಗ ರನ್‌ಗಳು ಸ್ವಾಭಾವಿಕವಾಗಿ ಹರಿದು ಬರುತ್ತವೆ ಎಂದು ಭಜ್ಜಿ ತಿಳಿಸಿದ್ದಾರೆ.
ಉತ್ತಪ್ಪ ಕಿವಿ ಮಾತು: ಇದೇ ವಿಚಾರವಾಗಿ ರಾಬಿನ್ ಉತ್ತಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಒಬ್ಬ ಅದ್ಭುತ ಬ್ಯಾಟರ್. ಇದನ್ನೂ ಸದಾ ಅವರು ನೆನಪಿಸಿಕೊಳ್ಳಬೇಕು. ನನ್ನ ಅಭಿಪ್ರಾಯದ ಪ್ರಕಾರ ಕೊಹ್ಲಿ ಸ್ವಲ್ಪ ಒತ್ತಡದಲ್ಲಿ ಬ್ಯಾಟಿಂಗ್ಗೆ ಬರುವಂತೆ ಕಾಣಿಸುತ್ತದೆ.
ಆದಾಗ್ಯೂ, ಯಾವುದೇ ಒತ್ತಡ ಇಲ್ಲದೆ ಬ್ಯಾಟಿಂಗ್ ಮಾಡಿದಾಗ ರನ್‌ಗಳು ಬರುತ್ತವೆ. ಕೊಹ್ಲಿ ತಮ್ಮ ಹೆಚ್ಚಿನ ರನ್‌ಗಳನ್ನು ಎರಡನೇ ಮತ್ತು ಮೂರನೇ ಸ್ಲಿಪ್‌ಗಳ ನಡುವೆ ಗಳಿಸುತ್ತಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಹೆಚ್ಚಿನ ರನ್‌ಗಳು ಕೀಪರ್ ಮತ್ತು ಫಸ್ಟ್ ಸ್ಲಿಪ್ ನಡುವೆ ಬಂದಿವೆ.
ಅಲ್ಲದೇ ಪ್ರತಿ ಬಾರಿಯೂ ಆಫ್‌ಸೈಡ್ ಕವರ್ ಡ್ರೈವ್ ಆಡಲು ಪ್ರಯತ್ನಿಸುತ್ತಿದ್ದಾರೆ. ಇದು ಕೊಹ್ಲಿಯ ನೆಚ್ಚಿನ ಶಾಟ್ ಆಗಿದ್ದರೂ, ತುಂಬಾ ಅಪಾಯಕಾರಿಯೂ ಆಗಿದೆ. ಈ ಒಂದು ತಪ್ಪನ್ನು ಸರಿಪಡಿಸಿಕೊಂಡರೆ ಕೊಹ್ಲಿ ಮತ್ತೆ ತಮ್ಮ ಫಾರ್ಮ್ ಮರಳಿ ಪಡೆಯುತ್ತಾರೆ ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ: ಹಾರ್ದಿಕ್ ಟ್ರೋಲ್!