Indian national anthem in Pakistan : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಿ ಇಂದಿಗೆ 4 ದಿನಗಳಾಗಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದು ಟೂರ್ನಿಯ ನಾಲ್ಕನೇ ಪಂದ್ಯ ನಡೆಯುತ್ತಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, ಪಾಕಿಸ್ತಾನದ ಗಡಾಫಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಐಸಿಸಿ ನಿಯಮದಂತೆ ಪಂದ್ಯ ಪ್ರಾರಂಭಕ್ಕೂ ಮೊದಲು ಉಭಯ ತಂಡಗಳ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಲಾಗುತ್ತದೆ.
ಆದರೆ ಪಿಸಿಬಿ ಎಡವಟ್ಟು ಮಾಡಿದ್ದರಿಂದ ಲಾಹೋರ್ ಮೈದಾನದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಹೌದು, ಆಸ್ಟ್ರೇಲಿಯಾದ ರಾಷ್ಟ್ರಗೀತೆ ಪ್ರಸಾರ ಮಾಡುವ ಬದಲು ಭಾರತದ ರಾಷ್ಟ್ರಗೀತೆ ಪ್ರಸಾರವಾಗಿದೆ. ಎರಡು ಸೆಕೆಂಡ್ಗಳ ಕಾಲ ಪ್ಲೇ ಮಾಡಲಾಗಿದೆ. 'ಭಾರತ ಭಾಗ್ಯವಿದಾತ' ಎಂದು ಕೇಳಿಸಿದೆ. ಇದರ ಬೆನ್ನಲ್ಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
Lmao, they played the Indian national anthem instead of Australia at Lahore for a couple of seconds by mistake.#ENGvsAUS pic.twitter.com/j5vhpiSV1O
— GOAT Sachin (@GOATSachin) February 22, 2025
ಕೆಲವರು ಇದು ಪಾಕಿಸ್ತಾನ ವಿರುದ್ಧ ನಡೆಯಲಿರುವ ಭಾರತ ಪಂದ್ಯ ಗೆಲುವಿನ ಸಂಕೇತವಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ನಾಳೆಯ ಪಂದ್ಯ ದುಬೈನಲ್ಲಿ ನಡೆಯುತ್ತಿದೆ ಎಂದು ಕಾಲೆಳೆದಿದ್ದಾರೆ. ಪಾಕಿಸ್ತಾನ ಭಾರತೀಯರನ್ನು ರಂಜಿಸುವುದರಲ್ಲಿ ಸದಾ ಮುಂದಿರುತ್ತದೆ ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಭಾರತ ದುಬೈನಲ್ಲಿದ್ದರು ಪಾಕ್ನಲ್ಲಿ ರಾಷ್ಟ್ರಗೀತೆ ಮೊಳಗುತ್ತಿದೆ. ಇದು ಭಾರತದ ಗತ್ತು ಎಂದಿದ್ದಾರೆ.
ಧ್ವಜ ವಿವಾದ : ಇದಕ್ಕೂ ಮುನ್ನ, ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಪಾಕ್ಕಿಸ್ತಾನದ ಮೈದಾನಗಳಲ್ಲಿ ಭಾರತದ ಧ್ವಜವನ್ನು ಹಾರಿಸದೆ ಟೀಕೆಗೆ ಗುರಿಯಾಗಿತ್ತು. ಸಮಾನ್ಯವಾಗಿ ಐಸಿಸಿ ಆಯೋಜಿತ ಟೂರ್ನಿಗಳನ್ನು ಹೋಸ್ಟ್ ಮಾಡುವ ರಾಷ್ಟ್ರವು, ಪಂದ್ಯಗಳು ನಡೆಯುವ ಎಲ್ಲಾ ಮೈದಾನಗಳಲ್ಲಿ ಟೂರ್ನಿಯಲ್ಲಿ ಭಾಗಿಯಾಗುವ ತಂಡಗಳ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು.
ಆದರೆ ಪಾಕ್ ಭಾರತದ ಧ್ವಜ ಹೊರತುಪಡಿಸಿ ಉಳಿದ ತಂಡಗಳ ರಾಷ್ಟ್ರೀಯ ಧ್ವಜ ಪ್ರದರ್ಶನ ಮಾಡಿತ್ತು. ಇದರ ಬೆನ್ನಲ್ಲೇ ಟೀಕೆಗಳು ಕೇಳಿಬಂದ ನಂತರ ಎಚ್ಚೆತ್ತುಕೊಂಡ ಪಾಕ್ ಪಂದ್ಯಾವಳಿ ಆರಂಭಕ್ಕೂ ಮೊದಲು ಭಾರತದ ಧ್ವಜವನ್ನು ಪ್ರದರ್ಶನ ಮಾಡಿತು.
ನಾಳೆ ಭಾರತ-ಪಾಕಿಸ್ತಾನ ಫೈಟ್ : ಏತನ್ಮಧ್ಯೆ, ಟೂರ್ನಿಯ ಭಾಗವಾಗಿ ಭಾನುವಾರ (ಫೆ.23) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿವೆ. ಈ ಹೈವೊಲ್ಟೇಜ್ ಪಂದ್ಯಕ್ಕೆ ದುಬೈ ಮೈದಾನ ಆತಿಥ್ಯ ವಹಿಸಿಕೊಂಡಿದೆ.
ಸಂಭಾವ್ಯ ತಂಡಗಳು - ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ.
ಪಾಕಿಸ್ತಾನ : ಬಾಬರ್ ಅಜಮ್, ಸೌದ್ ಶಕೀಲ್, ಇಮಾಮ್ ಉಲ್ ಹಕ್, ಖುಶ್ದಿಲ್ ಶಾ, ತಯ್ಯಬ್ ತಾಹಿರ್, ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಆಘಾ, ಹರಿಸ್ ರೌಫ್, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ, ನಸೀಮ್ ಶಾ.
ಇದನ್ನೂ ಓದಿ: ನಾಳೆ ಭಾರತ - ಪಾಕ್ ಮಹಾಯುದ್ಧ: ತಂಡಕ್ಕೆ ಡೇಂಜರಸ್ ಪ್ಲೇಯರ್ ಎಂಟ್ರಿ!
ಇದನ್ನೂ ಓದಿ: ಪಾಕ್ ವಿರುದ್ಧ 8 ವರ್ಷದ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್!