ಶಿವಮೊಗ್ಗ: ಧಮ್ ತಾಕತ್ ಇದ್ದರೆ ಭದ್ರಾವತಿ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ವಿರುದ್ದ ಇಂದು ಭದ್ರಾವತಿ ಜೆಡಿಎಸ್ ತಾಲೂಕು ಘಟಕ ಹಾಗೂ ಬಿಜೆಪಿ ಘಟಕ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ''ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್ಐಆರ್ ಹಾಕಿ, ತನಿಖೆ ಮಾಡಿಸಿ'' ಎಂದು ಆಗ್ರಹಿಸಿದರು.
''ಭದ್ರಾವತಿ ನಾಗರಿಕರು ಬೇಸತ್ತಿದ್ದಾರೆ. ಹೋರಾಟದ ಪ್ರತಿಫಲ ತಕ್ಷಣ ಸಿಗುವಂತದ್ದು ಅಲ್ಲ. ಅದಕ್ಕೆ ನಿರಂತರ ಹೋರಾಟ ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. ನಿಮ್ಮ ದೌರ್ಜನ್ಯ ಬಹಳ ದಿನ ಇರಲ್ಲ. ನಿಮಗೆ ಸಿಕ್ಕ ಅವಕಾಶವನ್ನು ಅಭಿವೃದ್ದಿಗೆ ಬಳಸಬೇಕಿತ್ತು. ಆದರೆ ಯುವಕರನ್ನು ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಇಂದು ಭದ್ರಾವತಿಗೆ ಸರ್ಕಾರಿ ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ'' ಎಂದು ಆರೋಪಿಸಿದರು.
''ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಮ್ಮಪ್ಪ ಎರಡು ಸಲ ಸಿಎಂ ಆಗಿದ್ದರೂ ಸಹ ಇದುವರೆಗೂ ಅಧಿಕಾರಿಗಳಿಗೆ ಒಂದು ಕೆಲಸವನ್ನು ಮಾಡಿ ಎಂದು ನಾನು ಫೋನ್ ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು'' ಎಂದು ನಿಖಿಲ್ ಹೇಳಿದರು.
''ವಿಶಾಖಪಟ್ಟಣಂನ ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ಗೆ (RINL) ಹಣ ಬಿಡುಗಡೆ ಆಗಿದೆ. ಭದ್ರಾವತಿಯ ವಿಎಸ್ಐಎಲ್ಗೆ ಕೂಡ 15 ಸಾವಿರ ಕೋಟಿ ರೂ. ಹೂಡಿಕೆಯ ಅಗತ್ಯವಿದೆ. ಈ ಕಾರ್ಖಾನೆಯನ್ನು ಮರಳಿ ತೆರೆಯಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ದೆಹಲಿ ಮಟ್ಟದಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ಅವರು ತಿಳಿಸಿದರು.
![jds-and-bjp-protest-against-threat-to-bhadravati-mines-and-geology-officer-case](https://etvbharatimages.akamaized.net/etvbharat/prod-images/14-02-2025/23544499_thuews.jpg)
ಭದ್ರಾವತಿಯ ಮಾಧವರಾವ್ ವೃತ್ತದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್, ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಗೌಡ, ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಪ್ರಸನ್ನ ಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಮಧು ಕುಮಾರ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್